ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ: ಎಂ.ಬಿ.ಪಾಟೀಲ್

Update: 2018-10-19 14:07 GMT

ವಿಜಯಪುರ, ಅ. 19: ‘ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಯಾವುದೇ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಈ ಸಂಬಂಧ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಶಾಸಕ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಹೇಳಿಕೆ ಪಕ್ಷದ ಹೇಳಿಕೆಯಲ್ಲ. ಹೈಕಮಾಂಡ್ ಕೂಡ ಈ ಬಗ್ಗೆ ಯಾವ ಸೂಚನೆ ನೀಡಿಲ್ಲ. ಉಪಚುನಾವಣೆ ಸಂದರ್ಭದಲ್ಲಿ ತಾನು ಈ ಶಿವಕುಮಾರ್ ಹೇಳಿಕೆಯನ್ನು ಹೆಚ್ಚು ಬೆಳೆಸಲು ಇಚ್ಛಿಸುವುದಿಲ್ಲ ಎಂದು ಹೇಳಿದರು.

ಶಿವಕುಮಾರ್ ಅವರು ಎಲ್ಲ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಚರ್ಚೆ ನಡೆಸುವೆ. ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಸಂಪುಟದ ಸಭೆಯಲ್ಲಿ ಏಕೆ ಬೆಂಬಲ ನೀಡಿದ್ದರು ಎಂದು ಪಾಟೀಲ್ ಪ್ರಶ್ನಿಸಿದರು.

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹೊಡೆತ ಬಿದ್ದಿಲ್ಲ. ದಕ್ಷಿಣ ಕರ್ನಾಟಕದ ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಗಳಲ್ಲಿ ಯಾವ ಕಾರಣಕ್ಕಾಗಿ ಪಕ್ಷ ಹಿನ್ನಡೆ ಅನುಭವಿಸಿದೆ ಎಂಬ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಮೊದಲು ತಮ್ಮ ಮನೆ ಸರಿಪಡಿಸಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News