ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ನಿವೇಶನಗಳ ಸಮೀಕ್ಷೆ: ಆರ್.ವಿ.ದೇಶಪಾಂಡೆ

Update: 2018-10-19 14:26 GMT

ಧಾರವಾಡ, ಅ.19: ಹೊಸ ವಸತಿ ವಿನ್ಯಾಸಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ನಿವೇಶನಗಳ ಸಮೀಕ್ಷಾ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡು, ಶಾಲೆ, ಹಾಸ್ಟೆಲ್ ನಿರ್ಮಾಣಕ್ಕೆ ಆದ್ಯತೆಯಡಿ ಒದಗಿಸಬೇಕು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳೂ ಸೇರಿದಂತೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಯಾವ ಭಾಗದಲ್ಲಿ ಹೆಚ್ಚಿನ ಪ್ರವೇಶ ಆಗುತ್ತಿದೆಯೋ ಅಲ್ಲಿ ಬಾಡಿಗೆ ಕಟ್ಟಡಗಳನ್ನು ಗುರುತಿಸಿ, ಹೊಸ ಹಾಸ್ಟೆಲ್ ಸ್ಥಾಪಿಸಲು ಪ್ರಸ್ತಾವನೆ ಕಳಿಸಿದರೆ ಸರಕಾರದ ಮಟ್ಟದಲ್ಲಿ ಮಂಜೂರಾತಿ ಕೊಡಿಸಲಾಗುವುದು ಎಂದು ಅವರು ತಿಳಿಸಿದರು.

ನಗರ ಪ್ರದೇಶಗಳಲ್ಲಿ ಹೊಸ ಲೇಔಟ್‌ಗಳಿಗೆ ಅನುಮತಿ ನೀಡುವಾಗ ಕಡ್ಡಾಯವಾಗಿ ಸಾರ್ವಜನಿಕ ಉದ್ದೇಶಕ್ಕೆ ‘ಸಿಎ’ ನಿವೇಶನ ಮೀಸಲಿಡಬೇಕು. ಅವುಗಳನ್ನು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್ ಹಾಗೂ ಶಾಲೆಗಳಿಗೆ ಆದ್ಯತೆಯ ಮೇಲೆ ಒದಗಿಸಬೇಕು ಎಂದು ಅವರು ಸೂಚಿಸಿದರು.

ಅವಳಿನಗರದಲ್ಲಿ 3 ಇಂದಿರಾ ಕ್ಯಾಂಟೀನ್ ಆರಂಭವಾಗಿವೆ. ಉಳಿದ 9 ಕ್ಯಾಂಟೀನ್‌ಗಳನ್ನು ಶೀಘ್ರ ಆರಂಭಿಸಬೇಕು. ಅವಳಿನಗರಕ್ಕೆ ಕುಡಿಯುವ ನೀರು ಪೂರೈಸಲು ಹಣ ಲಭ್ಯವಿದೆ. ಅದನ್ನು ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಹಾಗೂ ಸರಿಯಾದ ವಿತರಣೆಗೆ ರೂಪಿಸಿರುವ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸ್ವಚ್ಛತಾ ಪ್ರಮಾಣ ಸುಧಾರಣೆ ಆಗಬೇಕು ಅವರು ಹೇಳಿದರು.

ಅರಣ್ಯವಾಸಿಗಳ ಹಕ್ಕು ಕಾಯ್ದೆಯಡಿ ಎಸ್ಟಿ ಹಾಗೂ ಇತರ ಬುಡಕಟ್ಟುಗಳಿಗೆ ನಿಯಮಾನುಸಾರ ತ್ವರಿತವಾಗಿ ಹಕ್ಕು ಪತ್ರ ವಿತರಿಸಬೇಕು. ಜಿಲ್ಲಾಧಿಕಾರಿಗಳು, ಜಿಪಂ ಸಿಇಓ, ಉಪವಿಭಾಗಾಧಿಕಾರಿಗಳು ನಿರಂತರವಾಗಿ ಗ್ರಾಮೀಣ ಪ್ರದೇಶಗಳಿಗೆ, ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಗುಣಮಟ್ಟ ಪರೀಕ್ಷಿಸಬೇಕು. ಬೆಳೆವಿಮೆ, ಬೆಳೆ ಪರಿಹಾರ ಪಾವತಿಯಲ್ಲಿ ತಾಂತ್ರಿಕ ದೋಷಗಳನ್ನು ತ್ವರಿತವಾಗಿ ಸರಿಪಡಿಸಬೇಕು ಎಂದು ದೇಶಪಾಂಡೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಮಾತನಾಡಿ, ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ 341 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆದಿದೆ. 100 ಕೋಟಿ ರೂ.ಗಳ ಕಾಮಗಾರಿಗಳಿಗೆ ಶೀಘ್ರ ಟೆಂಡರ್ ಕರೆಯಲಾಗುವುದು ಎಂದರು.

ಈ ಹಿಂದೆ ದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 62ನೇ ರ್ಯಾಂಕಿಂಗ್ ನಲ್ಲಿದ್ದ ಅವಳಿ ನಗರದ ಸ್ಥಾನ ಈಗ 42 ನೇ ಸ್ಥಾನಕ್ಕೇರಿದೆ. ಇನ್ನಷ್ಟು ಕಸ ಸಂಗ್ರಹಣಾ ವಾಹನಗಳು ಬರಲಿವೆ, ಕಸ ಸಂಗ್ರಹಣಾ ಘಟಕ ನಗರದಿಂದ ದೂರ ಇದೆ. ಈಗ ಘನತ್ಯಾಜ್ಯ ವಿಲೇವಾರಿಗೆ 60 ಕೋಟಿ ರೂ.ಬಂದಿದೆ. ಇನ್ನಷ್ಟು ವಾಹನಗಳನ್ನು ಬಳಸಿಕೊಳ್ಳುವ ಮೂಲಕ ಸ್ವಚ್ಛತಾ ಕಾರ್ಯವನ್ನು ಇನ್ನಷ್ಟು ಸುಧಾರಿಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಸಂಸದ ಪ್ರಹ್ಲಾದ್ ಜೋಶಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಜಿ.ಪಂ ಅಧ್ಯಕ್ಷೆ ಚೈತ್ರಾ ಶಿರೂರ, ಶಾಸಕರಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News