ಡಿಕೆಶಿ ವಿರುದ್ಧ ಎಂ.ಬಿ ಪಾಟೀಲ್, ವಿನಯ್ ಕುಲಕರ್ಣಿ ಧ್ವನಿ ಎತ್ತಿದ್ದು ಸರಿಯಲ್ಲ: ಶಾಮನೂರು ಶಿವಶಂಕರಪ್ಪ

Update: 2018-10-19 14:35 GMT

ದಾವಣಗೆರೆ,ಅ.18: ಹಿಂದಿನ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಸ್ವತಂತ್ರ ಧರ್ಮದ ಹೆಸರಿನಲ್ಲಿ ಒಡೆದು ಸರ್ಕಾರ ತಪ್ಪು ಮಾಡಿದೆಯೆಂದು ಸಚಿವ ಡಿ.ಕೆ. ಶಿವಕುಮಾರ್ ಕ್ಷಮೆಯಾಚಿಸಿದ್ದಾರೆ. ಅದಕ್ಕೆ ಸಚಿವ ಡಿಕೆಶಿ ವಿರುದ್ಧ ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ಧ್ವನಿ ಎತ್ತಿದ್ದು ಸರಿಯಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಆಕ್ಷೇಪಿಸಿದರು. 

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಮಾಜ ಒಡೆಯುವ ಕೆಲಸ ಯಾರೇ ಮಾಡಿದ್ದರೂ ಅದಕ್ಕೆ ನಮ್ಮ ವಿರೋಧವಿದೆ. ಇನ್ನಾದರೂ ಈ ಇಬ್ಬರು ವೀರಶೈವ ಲಿಂಗಾಯತ ಸಮಾಜ ಒಡೆಯುವ ಕೆಲಸ ಬಿಡಲಿ. ಬಸವಣ್ಣ ಏನು ಹೇಳಿದ್ದಾರೋ ಅಂತಹ ಅಂಶ ಜೀವನದಲ್ಲಿ ಅಳವಡಿಸಿಕೊಳ್ಳಿ. ಹಣ, ಅಂತಸ್ತು ಎಷ್ಟೇ ಇದ್ದರೂ ಗರ್ವ ಇರಬಾರದು. ಎಂ.ಬಿ.ಪಾಟೀಲ್ ಇನ್ನಾದರೂ ತಮ್ಮ ವರ್ತನೆ ತಿದ್ದಿಕೊಳ್ಳಲಿ. ಮಾತಿನ ಮೇಲೆ ಹಿಡಿತವಿರಲಿ ಎಂದರು.

ಸಚಿವ ಡಿಕೆಶಿ ವೀರಶೈವ ಲಿಂಗಾಯತ ಸಮಾಜ ಒಡೆದಿದ್ದೇ ಕಾಂಗ್ರೆಸ್ ಹಿನ್ನಡೆಗೆ ಕಾರಣವೆಂದು ಸತ್ಯ ಹೇಳಿದ್ದಾರೆ. ಹಿಂದೆ ಸಿದ್ದರಾಮಯ್ಯ ಇದೇ ಎಂ.ಬಿ. ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಒತ್ತಡಕ್ಕೊಳಗಾಗಿ ಸಮಾಜ ಒಡೆಯುವ ಕೆಲಸ ಮಾಡಿದರು. ಅಷ್ಟೇ ಅಲ್ಲದೆ, 2 ಕೋಟಿ ಜನಸಂಖ್ಯೆ ಇದ್ದ, ರಾಜ್ಯದ ಶೇ.25ರಷ್ಟು ಜನರಿರುವ ವೀರಶೈವ ಲಿಂಗಾಯತ ಸಮಾಜ ಜಾತಿ ಗಣತಿ ಹೆಸರಿನಲ್ಲಿ ಕೇವಲ 70 ಲಕ್ಷವಿದೆಯೆಂದು ತೋರಿಸಿದರು ಎಂದ ಅವರು, ಕರ್ನಾಟಕವೆಂದು ಹೆಸರಿಟ್ಟರೆ ವೀರಶೈವ ಲಿಂಗಾಯತ ಪ್ರಾಬಲ್ಯವೇ ರಾಜ್ಯದಲ್ಲಿ ಹೆಚ್ಚಾಗುತ್ತದೆಂದು ಕೆಲವರು ಅಡ್ಡಿಪಡಿಸಿದ್ದರು. ಕ್ರಮೇಣ ರಾಜ್ಯದ ಹೆಸರು ಕರ್ನಾಟಕವೆಂದು ನಾಮಕರಣಗೊಂಡಿತು. ಉಪ ಜಾತಿ ಹೊರತುಪಡಿಸಿದರೆ, ರಾಜ್ಯದ ಒಟ್ಟು ಜನಸಂಖ್ಯೆಯ ಶೇ.25 ಜನಸಂಖ್ಯೆ ಇರುವ ವೀರಶೈವ ಲಿಂಗಾಯತವೇ ಅಗ್ರ ಜನಾಂಗವಾಗಿದ್ದು, 2ನೇ ಸ್ಥಾನದಲ್ಲಿ ಒಕ್ಕಲಿಗ ಸಮಾಜವಿದೆ ಎಂದರು.

ಈ ಸಂದರ್ಭ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ಎಸ್.ವೀರಣ್ಣ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News