ಪ್ರಧಾನಮಂತ್ರಿ ಆವಾಸ್ ಯೋಜನೆ ಬಡತನದ ವಿರುದ್ಧದ ಹೋರಾಟ: ಮೋದಿ

Update: 2018-10-19 15:52 GMT

ಶಿರಡಿ(ಮಹಾರಾಷ್ಟ್ರ),ಅ.19: ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಯು ಬಡತನವನ್ನು ನಿರ್ಮೂಲನೆಗೊಳಿಸುವ ತನ್ನ ಸರಕಾರದ ಪ್ರಯತ್ನವಾಗಿದೆ ಎಂದು ಶುಕ್ರವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು,ಶಿಕ್ಷಣದ ಮೂಲಕ ತಮ್ಮ ಮುಂದಿನ ಪೀಳಿಗೆಗಳನ್ನು ಸಬಲಗೊಳಿಸುವಂತೆ ಯೋಜನೆಯ ಫಲಾನುಭವಿಗಳನ್ನು ಆಗ್ರಹಿಸಿದರು.

 ಅಹ್ಮದ್‌ನಗರ ಜಿಲ್ಲೆಯ ಶಿರಡಿಯಲ್ಲಿ ಪಿಎಂಎವೈ ಅಡಿ 40,000 ಫಲಾನುಭವಿಗಳಿಗಾಗಿ ಏರ್ಪಡಿಸಲಾಗಿದ್ದ ‘ಇ-ಗೃಹಪ್ರವೇಶ’ದಲ್ಲಿ 10 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮನೆಯ ಕೀಲಿ ಕೈಗಳನ್ನು ವಿತರಿಸಿದ ಬಳಿಕ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಹಾರಾಷ್ಟ್ರದ ವಿವಿಧ ಪ್ರದೇಶಗಳ ಪಿಎಂಎವೈ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಮೋದಿ,ಯೋಜನೆಯಡಿ ಪಕ್ಕಾ ಮನೆಗಳನ್ನು ಪಡೆದುಕೊಂಡವರು ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯ ಲಾಭಗಳನ್ನೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಿಮ್ಮಲ್ಲಿ ಎಷ್ಟು ಜನರು ವಿದ್ಯಾವಂತರಿದ್ದೀರಿ ಎಂದು ಥಾಣೆಯ ಮಹಿಳಾ ಫಲಾನುಭವಿಗಳನ್ನು ಪ್ರಶ್ನಿಸಿದಾಗ ಓರ್ವ ಮಹಿಳೆ ಮಾತ್ರ ಕೈ ಎತ್ತಿದ್ದು,ನಿಮ್ಮ ಮುಂದಿನ ಪೀಳಿಗೆಯು ಶಿಕ್ಷಣವನ್ನು ಪಡೆದುಕೊಳ್ಳುವಂತೆ ನೀವು ನೋಡಿಕೊಳ್ಳಬೇಕು. ವಸತಿ ಯೋಜನೆಯು ಬಡತನದ ವಿರುದ್ಧ ಹೋರಾಟವಾಗಿದೆ. ನೂತನ ಗೃಹಗಳೊಂದಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ಸೌಲಭ್ಯಗಳನ್ನೂ ನೀವು ಪಡೆಯಬಹುದು ಎಂದು ಮೋದಿ ತಿಳಿಸಿದರು.

ಮರಾಠಿಯಲ್ಲಿಯೇ ಹೆಚ್ಚಿನ ಸಂವಾದ ನಡೆಸಿದ ಅವರು, ಸತಾರಾದ ಫಲಾನುಭವಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ,ತನ್ನ ಗುರು ಲಕ್ಷ್ಮಣ ನಾಮದಾರ್ ಅವರು ಸತಾರಾದವರೇ ಆಗಿದ್ದರು,ಹೀಗಾಗಿ ತನಗೆ ಈ ಊರಿನೊಂದಿಗೆ ವಿಶೇಷ ಸಂಬಂಧವಿದೆ ಎಂದರು.

ತಮ್ಮ ಗ್ರಾಮಗಳಲ್ಲಿ ಆಯುಷ್ಮಾನ್ ಭಾರತ್ ಮತ್ತು ಸ್ವಚ್ಛ ಭಾರತ್ ಅಭಿಯಾನವನ್ನು ಉತ್ತೇಜಿಸುವಂತೆಯೂ ಅವರು ಫಲಾನುಭವಿಗಳನ್ನು ಕೋರಿದರು.

ಶಿರಡಿ ಶ್ರೀ ಸಾಯಿಬಾಬಾ ದೇವಸ್ಥಾನ ಟ್ರಸ್ಟ್ ಹಮ್ಮಿಕೊಂಡಿರುವ 474 ಕೋ.ರೂ.ವೆಚ್ಚದ ಅಭಿವೃದ್ಧಿ ಯೋಜನೆಗಳಿಗೂ ಚಾಲನೆಯನ್ನು ನೀಡಿದ ಪ್ರಧಾನಿ,ಸಾಯಿಬಾಬಾರ ಸಮಾಧಿ ಶತಾಬ್ದಿ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡರು.

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News