ಮೈಸೂರಿಗೆ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲು ಹೊಸ ನೀಲಿನಕ್ಷೆ ಸಿದ್ಧ: ಎಚ್.ಡಿ.ಕುಮಾರಸ್ವಾಮಿ

Update: 2018-10-19 16:14 GMT

ಮೈಸೂರು,ಅ.19: ಮೈಸೂರಿಗೆ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲು ಹೊಸ ನೀಲಿ ನಕ್ಷೆಯನ್ನು ಸಿದ್ದಪಡಿಸಲಾಗಿದ್ದು ದಸರಾ ಮುಗಿದ ನಂತರ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಶುಕ್ರವಾರ ಲಲಿತ್ ಮಹಲ್ ಹೋಟೆಲ್‍ನಲ್ಲಿ ಮಾಧ್ಯಮದವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮೈಸೂರಿಗೆ ಪ್ರತಿನಿತ್ಯ ಪ್ರವಾಸಿಗರು ಆಗಮಿಸುತ್ತಾರೆ. ಮೈಸೂರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯೊಲು ಹಲವಾರು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತಿದ್ದು, ಪ್ರತಿ ಶನಿವಾರ ಮತ್ತು ರವಿವಾರ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುವುದು. ಆ ನಿಟ್ಟಿನಲ್ಲಿ ಪ್ರವಾಸೋದ್ಯವನ್ನು ಅಭಿವೃದ್ಧಿ ಪಡಿಸಲು ಚಿಂತಿಸಲಾಗಿದೆ ಎಂದು ಹೇಳಿದರು.

ಆರೋಗ್ಯ ಶ್ರೀ ಯೋಜನೆಯಲ್ಲಿ ಬದಲಾವಣೆಗೆ ಚಿಂತನೆ: ಯಶಸ್ವಿನಿ ಕಾರ್ಡ್ ದಾರರನ್ನು ಆರೋಗ್ಯ ಶ್ರೀ ಯೋಜನೆಯಲ್ಲಿ ಸೇರಿಸಿರುವುದರಿಂದ ಹೆಚ್ಚು ಅನಾನುಕೂಲಉಂಟಾಗಿದ್ದು, ಇದರಿಂದ ಜನರಿಗೆ ಸರಿಯಾದ ಚಿಕಿತ್ಸೆ ದೊರಕುತಿಲ್ಲ ಎಂಬ ದೂರುಗಳು ಬಂದಿವೆ. ಜೊತೆಗೆ ಖಾಸಗಿ ಆಸ್ಪತ್ರೆಗಳು ಸಹ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ವಿಚಾರ ಗಮನಕ್ಕೆ ಬಂದಿದ್ದು, ಹಾಗಾಗಿ ಆರೋಗ್ಯ ಶ್ರೀ ಯೋಜನೆಯಲ್ಲಿ ಬದಲಾವಣೆ ತರಲು ಚಿಂತಿಸಿರುವುದಾಗಿ ಹೇಳಿದರು.

ರಾಜ್ಯದ ಜನ  ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೂ ನಾನು ಹಣ ನೀಡುತ್ತಿದ್ದೇನೆ. ಕಳೆದ ನಾಲ್ಕು ತಿಂಗಳಿನಿಂದ ಆರೋಗ್ಯ ಶ್ರೀ ಯೋಜನೆಯಲ್ಲಿ 18 ಕೋಟಿ ಹಣ ನೀಡಲಾಗಿದೆ. ಆದರೂ ಇದರಿಂದ ತೊಂದರೆಯಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಯಾವುದೇ ಕಾಯಿಲೆಯಿಂದ ಬಳಲುತ್ತಿರುವವರು ನನ್ನ ಬಳಿ ಅಥವಾ ನಮ್ಮ ಇಲಾಖೆಗೆ ಬಂದು ತಮ್ಮ ಕಷ್ಟವನ್ನು ಹೇಳಿಕೊಂಡರೆ ಕೂಡಲೇ ಹಣ ಬಿಡುಗಡೆ ಮಾಡುವುದಾಗಿ ಹೇಳಿದರು.

ಶ್ರೀಘ್ರದಲ್ಲಿ ಮೈಸೂರು-ಬೆಂಗಳೂರು ರಸ್ತೆ ಅಭಿವೃದ್ದಿ: ಕಳೆದ ಸರ್ಕಾರ ಮೈಸೂರು-ಬೆಂಗಳೂರು ರಸ್ತೆಯನ್ನು ಹತ್ತು ಪಥದ ರಸ್ತೆ ನಿರ್ಮಾಣ ಮಾಡಲು ಘೋಷಿಸಿತ್ತು. ಆ ಕೆಲಸಗಳು ತ್ವರಿತ ಗತಿಯಲ್ಲಿ ಸಾಗಿ ಕಾಮಗಾರಿಗಳನ್ನು ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದಕ್ಕೆ ಅಡಚಣೆ ಉಂಟಾಗಿರುವ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಅವಕಾಶ ಕಲ್ಪಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ಮಹಿಳೆಯರಿಗೆ ವಿಷಾಧ ವ್ಯಕ್ತಪಡಿಸಿದ ಸಿಎಂ: ಮೈಸೂರು ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಜರುಗಿದ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಕೆಲವು ಮಹಿಳೆಯರಿಗೆ ಅನಾನೂಕೂಲ ಉಂಟಾಗಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮದಲ್ಲಿ ಬಂದಿರುವುದನ್ನು ಗಮನಿಸಿದ್ದೇನೆ. ಈ ಘಟನೆ ನಡೆಯಬಾರದಿತ್ತು. ಪೊಲೀಸರು ಹೆಚ್ಚು ಭದ್ರತೆ ಒದಗಿಸಿದ್ದರೂ ಇಂತಹ ವಾತಾವರಣ ನಿರ್ಮಾಣವಾಗಿರುವದು ಬೇಸರ ತರಿಸಿದೆ. ಇದರಿಂದ ನೊಂದ ಮಹಿಳೆಯರಲ್ಲಿ ವಿಷಾಧಿಸುತ್ತೇನೆ ಎಂದರು.

ದಸರಾ ಹಬ್ಬ ಶುಭಾಶಯ ಕೋರಿದ ಎಚ್.ಡಿ.ಕೆ: ನಾಡಿನ ಜನರಿಗೆ ದಸರಾ ಹಬ್ಬ ಶುಭಾಶಯಗಳು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ನಾಡಿನ ಜನ ಸುಭಿಕ್ಷವಾಗಿರಲಿ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಬಂದು ಜನ ಸಂತೃಪ್ತಿಯಿಂದ ಇರಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಕೇಳಿಕೊಂಡಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News