ಕ್ಷಮೆಯಾಚಿಸದಿದ್ದರೆ ಡಿಕೆಶಿ ಗೆ ಬಹಿಷ್ಕಾರ: ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಸ್ವಾಮಿ ಎಚ್ಚರಿಕೆ

Update: 2018-10-19 16:23 GMT

ಕಲಬುರ್ಗಿ, ಅ. 19: ‘ಪ್ರತ್ಯೇಕ ಲಿಂಗಾಯತ ಧರ್ಮ’ ವಿಚಾರದಲ್ಲಿ ತಪ್ಪು ಮಾಡಿದೆವು ಎಂದು ಕ್ಷಮೆಯಾಚಿಸಿ ಹೇಳಿಕೆ ನೀಡಿದ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬುದ್ಧಿ ಭ್ರಮಣೆಯಾಗಿದೆ’ ಎಂದು ಕಲಬುರ್ಗಿಯ ಶ್ರೀಶೈಲ ಸಾರಂಗಧರ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮಗೆ ಸಂಬಂಧವಿಲ್ಲದ ವಿಚಾರದಲ್ಲಿ ವೈದಿಕ ಸ್ವಾಮಿಗಳ ಒತ್ತಡಕ್ಕೆ ಮಣಿದು ಡಿಕೆಶಿ ಹೀಗೆ ಹೇಳಿಕೆ ನೀಡಿದ್ದು, ಇದು ಅವರ ಅವಿವೇಕಿತನಕ್ಕೆ ಸಾಕ್ಷಿ. ಅವರ ಅವನತಿ ಕಾಲ ಸಮೀಪಿಸುತ್ತಿದೆ ಎಂದು ಟೀಕಿಸಿದರು.

ತಮ್ಮ ಮೇಲಿನ ಆರೋಪಗಳಿಂದ ಶಿವಕುಮಾರ್ ಹೊರ ಬರಲಿ. ಅದು ಬಿಟ್ಟು ಮತ್ತೊಬ್ಬರ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ ಸ್ವಾಮೀಜಿ, ಶಿವಕುಮಾರ್ ಅವರು ತಕ್ಷಣವೇ ಲಿಂಗಾಯತ ಸಮುದಾಯದ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಒಕ್ಕಲಿಗ ಸಮುದಾಯದ ಡಿಕೆಶಿ ಕಾಂಗ್ರೆಸ್‌ಗೆ ಎಷ್ಟು ಒಕ್ಕಲಿಗರ ಓಟು ತಂದಿದ್ದಾರೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಲಿ. ಮುಖ್ಯಮಂತ್ರಿ ಆಗಬೇಕೆಂಬ ದುರಾಸೆಯಲ್ಲಿ ಸ್ವಾಮಿಯೊಬ್ಬರನ್ನು ಒಲಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡಿದ್ದು ಸಲ್ಲ ಎಂದು ಟೀಕಿಸಿದ ಸ್ವಾಮೀಜಿ, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಹೆಚ್ಚು ಮಂದಿ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಯಾವುದೇ ಸರಕಾರದ ಮೇಲೆ ನಾವು ಅವಲಂಬಿತರಾಗಿಲ್ಲ. ಲಿಂಗಾಯತ ಧರ್ಮಕ್ಕೆ 900ವರ್ಷಗಳ ಇತಿಹಾಸವಿದೆ. ಪ್ರತ್ಯೇಕ ಧರ್ಮಕ್ಕಾಗಿ ನಮ್ಮ ಹೋರಾಟ ಮುಂದುವರೆಯುತ್ತೆ. ಸುಪ್ರೀಂ ಕೋರ್ಟ್‌ಗೆ ಹೋಗಿ ಪ್ರತ್ಯೇಕ ಲಿಂಗಾಯತ ಧರ್ಮ ಪಡೆಯುತ್ತೇವೆ ಎಂದರು.

ಶಿವಕುಮಾರ್ ಇಲ್ಲಸಲ್ಲದ ಮಾತನಾಡುವುದನ್ನು ನಿಲ್ಲಿಸಿ ತಕ್ಷಣ ಲಿಂಗಾಯತ ಸಮುದಾಯಕ್ಕೆ ಕ್ಷಮೆ ಕೇಳಲಿ. ಇಲ್ಲದಿದರೆ ಅವರು ಉತ್ತರ ಕರ್ನಾಟಕ್ಕೆ ಬರದಂತೆ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಶ್ರೀಶೈಲ ಸಾರಂಗಧರ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News