ಸಚಿವ ಡಿಕೆಶಿಯನ್ನು ಸಂಪುಟದಿಂದ ಕೈಬಿಡಲು ಒತ್ತಾಯಿಸಿ ರಾಷ್ಟ್ರೀಯ ಬಸವ ಸೇನೆ ಪ್ರತಿಭಟನೆ

Update: 2018-10-19 16:47 GMT

ವಿಜಯಪುರ, ಅ. 19: ‘ಪ್ರತ್ಯೇಕ ಲಿಂಗಾಯತ ಧರ್ಮ’ದ ಆಶಯಕ್ಕೆ ವಿರುದ್ಧವಾಗಿ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡಿಸಿ ರಾಷ್ಟ್ರೀಯ ಬಸವ ಸೇನೆ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬಸವ ಸೇನೆ ಕಾರ್ಯಕರ್ತರು ಸಚಿವ ಡಿ.ಕೆ.ಶಿವಕುಮಾರ್ ಭಾವಚಿತ್ರ ಬೆಂಕಿ ಹಚ್ಚಿದರು. ಅಲ್ಲದೆ, ಕೆಲ ಪ್ರತಿಭಟನಾಕಾರರು ಭಾವಚಿತ್ರಕ್ಕೆ ಬೂಟಿಕಾಲಿನಿಂದ ಒದ್ದರು. ಇದೇ ವೇಳೆ ಸಚಿವ ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕಿಡಿಕಾರಿದರು.

ಪಕ್ಷಪಾತ ಮಾಡಿಲ್ಲ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಹಿಂದಿನ ಸರಕಾರ ಯಾವುದೇ ಪಕ್ಷಪಾತ ಮಾಡಿಲ್ಲ. ಆ ವೇಳೆ ಬೆಂಬಲಿಸಿದ್ದ ಡಿಕೆಶಿ, ಇದೀಗ ತಪ್ಪಾಗಿದೆ. ಕ್ಷಮಿಸಿ ಎಂದು ಹೇಳಿರುವುದು ಅಕ್ಷಮ್ಯ ಅಪರಾಧ. ಇಡೀ ಲಿಂಗಾಯತ ಧರ್ಮೀಯರಿಗೆ ಅಪಮಾನ ಮಾಡಿದ್ದಾರೆಂದು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರವಿಕುಮಾರ್ ಬಿರಾದಾರ ಟೀಕಿಸಿದರು.

ಇದೇ ವೇಳೆ ಮಾತನಾಡಿದ ಅವರು, ದ್ವೇಷ-ಅಸೂಯೆಯಿಂದ, ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬಾರದೆಂಬ ದುರುದ್ದೇಶದಿಂದ ಎಂ.ಬಿ.ಪಾಟೀಲ್, ಹೊರಟ್ಟಿ, ವಿನಯ ಕುಲಕರ್ಣಿ ಏಳಿಗೆ ಸಹಿಸದೆ, ಬಸವ ವಿರೋಧಿ ಪಂಚಪೀಠದ ರಂಭಾಪುರಿ ಸ್ವಾಮಿಯನ್ನು ಖುಷಿ ಪಡಿಸಲು ಅವರ ಸಮ್ಮುಖದಲ್ಲಿ ಡಿಕೆಶಿ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸಚಿವ ಡಿಕೆಶಿ ಹೇಳಿಕೆಯನ್ನು ಲಿಂಗಾಯತರಾಗಿ ನಾವೆಲ್ಲರೂ ಖಂಡಿಸುತ್ತೇವೆ. ಮುಖ್ಯಮಂತ್ರಿಗೆ ಬಸವಣ್ಣ, ಲಿಂಗಾಯತ ಸಮಾಜದ ಮೇಲೆ ಗೌರವವಿದ್ದರೆ, ತಕ್ಷಣವೇ ಶಿವಕುಮಾರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಅವರು ಆಗ್ರಹಿಸಿದರು.

‘ಸಿದ್ದರಾಮಯ್ಯ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈ ಹಾಕಬಾರದಾಗಿತ್ತು. ಈ ವಿಚಾರದಲ್ಲಿ ಹಿಂದಿನ ಸರಕಾರ ದೊಡ್ಡ ತಪ್ಪು ಮಾಡಿದ್ದು ನಿಜ. ಅದರ ಫಲ ಅನುಭವಿಸುತ್ತಿದ್ದಾರೆ. ಧರ್ಮದ ವಿಚಾರಕ್ಕೆ ಕೈಹಾಕಿ ಕೈ ಸುಟ್ಟು ಕೊಂಡಿದ್ದು, ಶಿವಕುಮಾರ್ ಸತ್ಯ ಹೇಳಿದ್ದಾರೆ’

-ಎನ್.ತಿಪ್ಪಣ್ಣ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News