ಗಿಡನೆಟ್ಟು ಪೋಷಿಸುವ ವಿದ್ಯಾರ್ಥಿಗಳಿಗೆ ಸಿಗಲಿದೆ ಇಂಟರ್ನಲ್ ಅಂಕ

Update: 2018-10-19 17:00 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.19: ರಾಜ್ಯಾದ್ಯಂತ ಸರಕಾರಿ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದರೆ ಅಂಕಗಳನ್ನು ಪಡೆಯಬಹುದಾಗಿದೆ. ಅರಣ್ಯ, ಪರಿಸರ ಮತ್ತು ಜೈವಿಕ ಇಲಾಖೆ ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯೊಂದಿಗೆ ಮಾತುಕತೆ ನಡೆಸಿದ್ದು, ಸದ್ಯದಲ್ಲಿಯೇ ಪ್ರಸ್ತಾವನೆಯನ್ನು ಸಲ್ಲಿಸಲಿದೆ ಎಂದು ತಿಳಿದುಬಂದಿದೆ.

ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವುದು ಮತ್ತು ಗಿಡ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಮನಗಂಡು ಇಂದಿನ ಮಕ್ಕಳಲ್ಲಿ ಗಿಡ ಮರ ಮತ್ತು ಪ್ರಕೃತಿ ಮೇಲೆ ಒಲವು ಹೆಚ್ಚಿಸಲು ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಅರಣ್ಯ ಖಾತೆ ಸಚಿವ ಆರ್.ಶಂಕರ್ ಹೇಳಿದ್ದಾರೆ.

ಪರಿಸರ ಇಲಾಖೆ ಮಂಡಿಸಿರುವ ಪ್ರಸ್ತಾವನೆಯಲ್ಲಿ, 8ರಿಂದ 10ನೇ ತರಗತಿಯವರೆಗೆ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ 10 ಗಿಡಗಳನ್ನು ನೀಡಲಾಗುತ್ತದೆ. ಮಕ್ಕಳು ಈ ಗಿಡಗಳನ್ನು ತಮ್ಮ ಶಾಲೆ, ಮನೆ ಆವರಣ ಅಥವಾ ರಸ್ತೆ ಬದಿ ಕೂಡ ನೆಡಬಹುದು. ಗಿಡ ನೆಟ್ಟು ಬಿಟ್ಟರೆ ಸಾಕಾಗುವುದಿಲ್ಲ, ಅದನ್ನು ಮುಂದಿನ ಮೂರು ವರ್ಷಗಳ ಕಾಲ ಬೆಳೆಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು 10ನೇ ತರಗತಿಗೆ ತಲುಪಿದಾಗ ಎಷ್ಟು ಗಿಡಗಳು ಉಳಿಯುತ್ತವೆ ಎಂದು ನೋಡಿಕೊಂಡು ಅಂಕಗಳನ್ನು ನೀಡಲಾಗುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿ 6 ತಿಂಗಳಿಗೊಮ್ಮೆ ಗಿಡಗಳನ್ನು ಪರೀಕ್ಷೆ ಮಾಡುತ್ತಾರೆ. ಗಿಡ ನೆಟ್ಟು 3ನೇ ವರ್ಷ ವಿದ್ಯಾರ್ಥಿಗಳ ಎಲ್ಲ 10 ಗಿಡಗಳನ್ನು ಉಳಿಸಿಕೊಂಡರೆ ಆ ವಿದ್ಯಾರ್ಥಿಗೆ 10 ಇಂಟರ್ನಲ್ ಮಾರ್ಕ್ಸ್ ನೀಡುವ ಕುರಿತು ಚಿಂತೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News