ಕೀಟನಾಶಕಗಳ ದುಷ್ಪರಿಣಾಮ ತಡೆಗೆ ಭಾರತೀಯ ಸಂಶೋಧಕರಿಂದ ಹೊಸ ಅಸ್ತ್ರ

Update: 2018-10-19 18:13 GMT

ಹೊಸದಿಲ್ಲಿ, ಅ. 19: ರೈತರು, ಇತರರು ಕೃಷಿಗೆ ಹಾಗೂ ಇತರ ಉದ್ದೇಶಗಳಿಗಾಗಿ ಕೀಟನಾಶಕ ಬಳಸುವ ಸಂದರ್ಭ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದು ಹಾಗೂ ಸಾವಿಗೆ ಕಾರಣವಾಗುವುದನ್ನು ತಡೆಯುವ ಚರ್ಮದ ಜೆಲ್ ಅನ್ನು ಭಾರತದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಜೈವಿಕ ತಂತ್ರಜ್ಞಾನ ವಿಭಾಗದ ಬೆಂಗಳೂರು ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಸ್ಟೆಮ್ ಸೆಲ್ ಬಯಾಲಜಿ ಹಾಗೂ ರಿಜನರೇಟಿವ್ ಮೆಡಿಸಿನ್‌ನ 13 ಮಂದಿ ಸದಸ್ಯರ ತಂಡ ಈ ಜೆಲ್ ಅನ್ನು ಸಂಶೋಧಿಸಿದ್ದಾರೆ. ಸಮುದ್ರ ನಳ್ಳಿ, ಸಿಗಡಿಗಳಂತಹ ಕಠಿಣ ಚರ್ಮಿಗಳ ಚಿಪ್ಪಿನಿಂದ ದೊರಕುವ ಚಿಸ್ಟೋಸಾನ್ ಅನ್ನು ರಾಸಾಯನಿಕವಾಗಿ ಪರಿವರ್ತಿಸಿ ಈ ಜೆಲ್ ಅನ್ನು ತಯಾರಿಸಲಾಗಿದೆ.

 ಈ ಜೆಲ್ ಸಂಶೋಧನೆ 2015ರಲ್ಲಿ ಆರಂಭವಾಗಿತ್ತು. ಕೃಷಿಯಲ್ಲಿ ಬಳಸುವ ಆರ್ಗನೋಪೋಸ್ಪೇಟ್ ಆಧರಿತ ಕೀಟನಾಶಕಗಳನ್ನು ಉಪಯೋಗಿಸುವ ಪ್ರಮುಖ ದೇಶಗಳಲ್ಲಿ ಭಾರತ ಕೂಡ ಒಂದಾಗಿರುವ ಹಿನ್ನೆಲೆಯಲ್ಲಿ ಈ ಸಂಶೋಧನೆ ಮಹತ್ವ ಪಡೆದುಕೊಂಡಿದೆ. ಕಳೆದ ವರ್ಷ ಮಹಾರಾಷ್ಟ್ರ ಒಂದರಲ್ಲೇ ಕೀಟನಾಶಕದಿಂದಾಗಿ 63 ರೈತರು ಸಾವನ್ನಪ್ಪಿದ್ದರು ಹಾಗೂ 1000ಕ್ಕೂ ಅಧಿಕ ರೈತರು ತೊಂದರೆಗೆ ಒಳಗಾಗಿದ್ದರು.

ಈ ಜೆಲ್ ಅನ್ನು ಪ್ರಾಣಿಯ ಮಾದರಿಗೆ ಲೇಪಿಸಿದಾಗ ಆರ್ಗನೋಪೋಸ್ಪೇಟ್ ಅನ್ನು ಸ್ಥಿರಗೊಳಿಸಿತು ಹಾಗೂ ನಿಷ್ಕ್ರಿಯಗೊಳಿಸಿತು.

 ಕೃಷಿ ಕೆಲಸಗಾರರು ಹೊಲಕ್ಕೆ ಕೀಟನಾಶಕಗಳನ್ನು ಸಿಂಪಡಿಸುವಾಗ ಈ ಜೆಲ್ ಅನ್ನು ಲೇಪಿಸಿಕೊಂಡು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದನ್ನು ತಡೆಯಬಹುದು ಎಂದು ಲ್ಯಾಬೊರೇಟರಿ ಆಫ್ ಸೆಲ್ಫ್ ಅಸೆಂಬ್ಲಡ್ ಬಯೋಮೆಟೀರಿಯಲ್ ಆ್ಯಂಡ್ ಟ್ರಾನ್ಸ್‌ಲೇಶನ್ ರಿಸರ್ಚ್ ‘ಇನ್‌ಸ್ಟೆಮ್’ನ ಹಿರಿಯ ಲೇಖಕ ಪ್ರವೀಣ್ ಕುಮಾರ್ ವೇಮುಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News