ಮಂಡ್ಯ ದಸರಾ ಮಹೋತ್ಸವ: ಗಮನ ಸೆಳೆದ ಜಾನಪದ ಕಲೆ-ಸ್ತಬ್ಧಚಿತ್ರ ಮೆರವಣಿಗೆ

Update: 2018-10-19 18:36 GMT

ಮಂಡ್ಯ, ಅ.19: ಜಿಲ್ಲೆಯ ಸಾಂಸ್ಕೃತಿಕ ಪರಂಪರೆಗೆ ಹೊಸದಾಗಿ ನಾಂದಿ ಹಾಡಿರುವ ಮಂಡ್ಯ ಯೂತ್ ಗ್ರೂಪ್ ವತಿಯಿಂದ ಐದನೇ ವರ್ಷದ ಮಂಡ್ಯ ದಸರಾ ಮಹೋತ್ಸವ ವಿಜಯದಶಮಿ ದಿನವಾದ ಶುಕ್ರವಾರ ಅದ್ಧೂರಿಯಾಗಿ ಜರುಗಿತು.

ನಗರದ ಶ್ರೀ ಕಾಳಿಕಾಂಬ ದೇವಾಲಯದ ಸಮೀಪವಿರುವ ಗಜೇಂದ್ರ ಮೋಕ್ಷ ಕೊಳದ ಬಳಿ ಶಾಸಕ ಎಂ.ಶ್ರೀನಿವಾಸ್ ಬನ್ನಿಮರಕ್ಕೆ ಸಾಂಪ್ರದಾಯಿಕ ಪೂಜೆ ನೆರವೇರಿಸಿ, ಬಳಿಕ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿದ್ದ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. 

ನರಸಿಂಹಾವತಾರ, ಮಹಿಷಿ ಅವತಾರ, ಭೂತಕೋಲ, ಮಹಿಳಾ ಪಟ ಕುಣಿತ, ವೀರಗಾಸೆ, ಬೆಂಕಿ ಭರಾಟೆ, ದೊಣ್ಣೆವರಸೆ, ಚಿಲಿಪಿಲಿ ಗೊಂಬೆ, ಹುಲಿವೇಷ, ಗೊರವರ ಕುಣಿತ, ಕೋಲಾಟ, ಡೊಳ್ಳು ಕುಣಿತ, ನಂದಿ ಧ್ವಜ, ಸೋಮನಕುಣಿತ, ನಾದಸ್ವರ, ನಾಸಿಕ್ ಡೊಳ್ಳು, ಗೊರವರ ಕುಣಿತ, ಎಂ.-ನಗಾರಿ, ತಮಟೆ, ಪಟ ಕುಣಿತ, ಗಾರುಡಿಗೊಂಬೆ, ನಂದಿ ಧ್ವಜ, ಕಂಸಾಳೆ ಸೇರಿದಂತೆ 30ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಗಜೇಂದ್ರ ಮೋಕ್ಷ ಕೊಳದಿಂದ ಆರಂಭವಾದ ಮೆರವಣಿಗೆ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ವಿಶ್ವೇಶ್ವರಯ್ಯ ರಸ್ತೆಗೆ ಆಗಮಿಸಿತು. ಹೆದ್ದಾರಿ ಆಸುಪಾಸಿನಲ್ಲಿ ಜನರು ನಿಂತು ಮೆರವಣಿಗೆಯನ್ನು ವೀಕ್ಷಿಸಿದರು. ಕೆಲವರು ಕಲಾತಂಡಗಳ ಎದುರು ನಿಂತು ಮೊಬೈಲ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಜನರು ಕಲಾತಂಡಗಳ ಮೆರವಣಿಗೆಯನ್ನು ಕಣ್ತುಂಬಿಕೊಂಡು ಪ್ರಶಂಸೆ ವ್ಯಕ್ತಪಡಿಸಿದರು.

ಹುಲಿ ವೇಷ ತಂಡದವರು ವಿಭಿನ್ನವಾಗಿ ನೃತ್ಯ ಮಾಡುತ್ತಾ ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಿದ್ದರು. ಬಂಡೂರು ತಳಿ ಕುರಿಗಳು ಪುಟ್ಟ ಹೆಜ್ಜೆಗಳನ್ನಿಟ್ಟು ಸಾಗುವುದರೊಂದಿಗೆ ಗಮನಸೆಳೆದವು. ವೀರಗಾಸೆ ತಂಡದವರ ನೃತ್ಯವೂ ಬೆರಗುಗೊಳಿಸುವಂತಿತ್ತು. ಡೊಳ್ಳು ಕುಣಿತದವರ ಡೊಳ್ಳಿನ ಸದ್ದು ರೋಮಾಂಚನಗೊಳಿಸುವಂತಿದ್ದರೆ, ಕಂಸಾಳೆ, ನಾದಸ್ವರದ ಕಂಪು ಎಲ್ಲರ ಮೆಚ್ಚುಗೆ ಗಳಿಸಿತು.

ಜಾಗತಿಕ ತಾಪಮಾನ ಏರಿಕೆ, ಭೂಮಿಯ ಮೇಲೆ ಮಾನವನ ಆಕ್ರಮಣ, ಪ್ಲಾಸ್ಟಿಕ್ ಬಳಕೆ ಮನುಕುಲಕ್ಕೆ ಧಕ್ಕೆ, ವಿಶ್ವಶಾಂತಿ ಸಾರುವ ಪಾರಿವಾಳ, ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ, ಇಂಧನ ಉಳಿಸಿ ಸಂದೇಶಗಳನ್ನು ಹೊತ್ತ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆಯಿತು. ಸ್ತಬ್ಧ ಚಿತ್ರಗಳಲ್ಲಿ ಫ್ಲೆಕ್ಸ್ ಹಾಗೂ ಪ್ಲಾಸ್ಟಿಕ್ ಬಳಕೆಯಿಲ್ಲದೆ ಕಾಗದವನ್ನು ಬಳಸಿ ಸ್ತಬ್ಧಚಿತ್ರಗಳನ್ನು ನಿರ್ಮಿಸಿದ್ದು ವಿಶೇಷವಾಗಿತ್ತು. 

ಮೆರವಣಿಗೆ ನೂರಡಿ ರಸ್ತೆ ಮೂಲಕ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಬಳಿ ಮೆರವಣಿಗೆ ಸಮಾಪ್ತಿಗೊಂಡಿತು. ಮೆರವಣಿಗೆಯುದ್ದಕ್ಕೂ ಸಂಚಾರಕ್ಕೆ ತೊಂದರೆ ಉಂಟಾಗದಂತೆ ಮಂಡ್ಯ ಯೂತ್ ಗ್ರೂಪ್ ಪದಾಧಿಕಾರಿಗಳು ಹಾಗೂ ಪೊಲೀಸರು ಜಾಗ್ರತೆ ವಹಿಸಿದ್ದರು. 

ರಾಜ್ಯ ಜಾನಪದ ಪರಿಷತ್ ಅಧ್ಯಕ್ಷ ಡಾ.ಟಿ.ತಿಮ್ಮೇಗೌಡ, ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್, ಉಪಾಧ್ಯಕ್ಷ ಡಾ.ಎಚ್.ಎಸ್.ಮಂಜು, ಡಾ.ಯಾಶಿಕಾ ಅನಿಲ್, ಯೂತ್ ಗ್ರೂಪ್ ಪದಾಧಿಕಾರಿಗಳಾದ ಬಿ.ಎಂ.ಅಪ್ಪಾಜಪ್ಪ, ರುದ್ರಪ್ಪ, ನಾಗೇಶ್, ಕೃಷ್ಣ, ರಾಜಣ್ಣ, ದರ್ಶನ್, ವಿನಯ್, ಮಲ್ಲೇಶ್, ಎ.ಬಿ.ಶಂಕರ್, ಪ್ರಮೋದ್ ಸೇರಿದಂತೆ ಹಲವಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News