ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ನಿಧನ

Update: 2018-10-20 14:03 GMT

ಬೆಂಗಳೂರು, ಅ. 20: ತ್ರಿವಿದ ದಾಸೋಹಿ, ಬಸವಣ್ಣನವರ ವಿಚಾರಧಾರೆಗಳಲ್ಲಿ ಅಚಲ ನಂಬಿಕೆಯುಳ್ಳ, ಪ್ರಖರ ವೈಚಾರಿಕತೆಯ ‘ಪ್ರಗತಿಪರ ಸ್ವಾಮೀಜಿ’ ಎಂದೇ ಗುರುತಿಸಿಕೊಂಡಿದ್ದ ಗದಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ (71) ಶನಿವಾರ ಬೆಳಗಿನಜಾವ ನಿಧನರಾಗಿದ್ದಾರೆ.

ತೋಂಟದಾರ್ಯ ಸಂಸ್ಥಾನಮಠದ 19ನೆ ಪೀಠಾಧಿಪತಿಗಳಾಗಿದ್ದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸಿದ್ದು, ಬೆಳಗಿನಜಾವ ನಿದ್ರೆಯಿಂದ ಏಳುವ ಮೊದಲೇ ಚಿರನಿದ್ರೆಗೆ ಜಾರಿದ್ದಾರೆ.

ಶ್ರೀಗಳು ಪ್ರತಿನಿತ್ಯ ಬೆಳಗಿನ ಜಾವವೇ ಏಳುತ್ತಿದ್ದರು. ಆದರೆ, ಶನಿವಾರ ಬೆಳಗ್ಗೆ 9 ಗಂಟೆಯಾದರೂ ಅವರು ಮಲಗಿದ್ದ ಕೋಣೆಯ ಬಾಗಿಲು ತೆರೆಯದಿರುವ ಹಿನ್ನೆಲೆಯಲ್ಲಿ ಸಂಶಯಗೊಂಡ ಮಠದ ಸಿಬ್ಬಂದಿ ಪರಿಶೀಲಿಸಿದಾಗ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ ಎಂದು ಗೊತ್ತಾಗಿದೆ.

ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಶ್ರೀಗಳನ್ನು ಪರೀಕ್ಷಿಸಿದ ಆಸ್ಪತ್ರೆಯ ವೈದ್ಯರು, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅವರು ಸಾವನ್ನಪ್ಪಿದ್ದಾರೆಂದು ದೃಢಪಡಿಸಿದ್ದಾರೆ. ಆ ಬಳಿಕ ಶ್ರೀಗಳು ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ತೋಂಟದಾರ್ಯ ಮಠಕ್ಕೆ ತೆಗೆದುಕೊಂಡ ಬಂದು ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು.

ಶುಕ್ರವಾರ ಮಠದಲ್ಲಿ ವಿಜಯದಶಮಿ ಅಂಗವಾಗಿ ನಡೆದ ‘ಬನ್ನಿ ಮುಡಿಯುವ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಗಳು, ಭಕ್ತರಿಗೆ ಬನ್ನಿ ಹಂಚಿ, ಬಂಗಾರದಂತೆ ಬಾಳೋಣ ಎಂದು ಆಶೀರ್ವಚನ ನೀಡಿದ್ದರು. ಆ ಬಳಿಕ ಊಟ ಮುಗಿಸಿ ರಾತ್ರಿ 11:30ರ ಸುಮಾರಿಗೆ ತನ್ನ ಕೊಠಡಿಯಲ್ಲಿ ವಿಶ್ರಾಂತಿಗೆ ತೆರಳಿದ್ದರು. ಆದರೆ, ಬೆಳಗ್ಗೆ ಅವರು ಲಿಂಗೈಕ್ಯರಾಗಿದ್ದು, ಭಕ್ತರಲ್ಲಿ ದುಃಖ ಮಡುಗಟ್ಟಿದೆ.

ಅನ್ನ, ಅಕ್ಷರ, ಪುಸ್ತಕ, ಸಂಸ್ಕೃತಿ ದಾಸೋಹದ ಪರಂಪರೆಯನ್ನು ಹುಟ್ಟುಹಾಕಿದ್ದ ಶ್ರೀಗಳು ಸರ್ವಧರ್ಮ ಸಹಿಷ್ಣುತೆಗೆ ಹೆಸರಾಗಿದ್ದರು. ಭಕ್ತರನ್ನು ಮತೀಯ ಚೌಕಟ್ಟಿನಿಂದ ಬಿಡಿಸಿ, ಮಾನವೀಯತೆಯ ವಿಸ್ತಾರಕ್ಕೆ ಅಣಿಗೊಳಿಸಿದ್ದರು. ಆ ಹಿನ್ನೆಲೆಯಲ್ಲಿ ‘ರಾಷ್ಟ್ರೀಯ ಕೋಮು ಸೌಹಾರ್ದತಾ ಪ್ರಶಸ್ತಿ’ ಪಡೆದಿದ್ದರು.

ಗದುಗಿನ ತೋಂಟದಾರ್ಯ ಮಠದ ಪ್ರಸಾದ ನಿಲಯ, ರಾಮೇಶ್ವರ ಪ್ರಸಾದ ನಿಲಯ, ಚಿಕ್ಕಪಡಸಲಗಿ, ಶಿರೋಳ, ಡಂಬಳ, ಅಣ್ಣಿಗೇರಿ, ರುದ್ನೂರು, ಮುಂಡರಗಿ ಪ್ರಸಾದ ನಿಲಯ ಹಾಗೂ ಹಾವೇರಿಯಲ್ಲಿ ಶಾಂತವೀರ ಪಟ್ಟಾಧ್ಯಕ್ಷರ ಪ್ರಸಾದ ನಿಲಯದಲ್ಲಿ ಪ್ರತಿದಿನ ದಾಸೋಹ ನಡೆಯುತ್ತಿರುವುದು ಮಠದ ವಿಶಿಷ್ಟತೆಗೆ ಸಾಕ್ಷಿ.

ತೋಂಟದಾರ್ಯ ಮಠದ ಜಾತ್ರೆಯು ವೈಚಾರಿಕ ಕ್ರಾಂತಿಯನ್ನುಂಟು ಮಾಡಿದೆ. ಈ ಜಾತ್ರೆಯಲ್ಲಿ ತೇರಿಗೆ ಅನ್ನ ಸುರಿಯುದಿಲ್ಲ. ಸ್ವಾಮೀಜಿಯ ಅಡ್ಡಪಲ್ಲಕ್ಕಿ ಸೇವೆ ನಡೆಯುವುದಿಲ್ಲ. ಹಿಂದೆ ತೇರು ಸಾಗುವಷ್ಟು ದೂರ ಜನಸಾಮಾನ್ಯರ ಜತೆಗೆ ಕಾಲ್ನಡಿಗೆಯಲ್ಲೇ ಸ್ವಾಮೀಜಿ ಸಾಗುವ ಮೂಲಕ ಹೊಸ ಪರಂಪರೆಯನ್ನು ಹುಟ್ಟು ಹಾಕಿದರು.

ಅಡ್ಡಪಲ್ಲಕ್ಕಿ ಸೇವೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಶ್ರೀಗಳು, ‘ಮನುಷ್ಯ- ಮನುಷ್ಯನನ್ನು ಹೊತ್ತುಕೊಂಡು ನಡೆಯುವುದು ಮಾನವೀಯತೆ ವಿರೋಧಿ’ ಎಂದು ನಂಬಿದ್ದರು. ಮಠದ ಜಾತ್ರೆಯನ್ನು ಧಾರ್ಮಿಕ ಕಾರ್ಯಕ್ರಮಗಳ ಚೌಕಟ್ಟಿನಿಂದ ಹೊರತಂದು, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಸ್ಪರ್ಶವನ್ನು ನೀಡಿದ ಕೀರ್ತಿ ತೋಂಟದ ಶ್ರೀಗಳಿಗೆ ಸಲ್ಲಬೇಕು.

ಜಾತ್ರೆಯನ್ನು ಜನಮುಖಿಗೊಳಿಸಿದಲ್ಲದೆ, ಸರ್ವಧರ್ಮದವರು ಪಾಲ್ಗೊಳ್ಳುವಂತೆ ಮಾಡಿದ್ದು ನಿಜಕ್ಕೂ ಅವರ ಸಾಧನೆಯೇ ಸರಿ. ನಾಗರ ಪಂಚಮಿ ದಿನದಂದು ಹುತ್ತಕ್ಕೆ ಹಾಲೆರೆಯುವ ಬದಲು ಬಡಮಕ್ಕಳಿಗೆ ಹಾಲುಣಿಸುವುದು, ಪವಾಡ ಬಯಲು ರಹಸ್ಯ ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ಜನ ಸಾಮಾನ್ಯರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದ ಅಪರೂಪದ ಸ್ವಾಮೀಜಿ.

ಕನ್ನಡ ನಾಡು, ನುಡಿ, ಜಲ, ಭಾಷೆ ವಿಚಾರದಲ್ಲಿ ಜನರ ಧ್ವನಿಯಾಗಿದ್ದ ಶ್ರೀಗಳು, ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ, ಗೋಕಾಕ್ ವರದಿ ಜಾರಿಗಾಗಿ 1982ರಲ್ಲಿ ಸಿಂದಗಿಯಲ್ಲಿ ಮೊದಲ ಬಹಿರಂಗ ಉಪವಾಸ ಸತ್ಯಾಗ್ರಹದ ನೇತೃತ್ವವನ್ನು ವಹಿಸಿದ್ದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಡಾ.ನಂಜುಂಡಪ್ಪವರದಿ ಅನುಷ್ಠಾನ, ಗಡಿ ಸಮಸ್ಯೆ, ‘ಪೋಸ್ಕೊ’ ಕಂಪೆನಿ ವಿರುದ್ಧದ ಹೋರಾಟ ಹಾಗೂ ಕಪ್ಪತಗುಡ್ಡಕ್ಕೆ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸುವುದು ಸೇರಿದಂತೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿನ ಹೋರಾಟದಲ್ಲಿಯೂ ಶ್ರೀಗಳು ಮುಂಚೂಣಿಯಲ್ಲಿದ್ದರು.

ರವಿವಾರ ಅಂತ್ಯ ಸಂಸ್ಕಾರ: ರವಿವಾರ ಸಂಜೆ 4 ಗಂಟೆ ಸುಮಾರಿಗೆ ತೋಂಟದಾರ್ಯ ಮಠದ ಆವರಣದಲ್ಲಿಯೇ ತ್ರಿವಿಧ ದಾಸೋಹಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News