ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಜಯಭೇರಿ ಬಾರಿಸಿದ ಬಿಜೆಪಿ ಲಡಾಖ್‌ನಲ್ಲಿ ಒಂದೂ ಸ್ಥಾನವನ್ನು ಗೆಲ್ಲಲು ವಿಫಲ

Update: 2018-10-20 13:55 GMT

ಶ್ರೀನಗರ,ಅ.20: ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 132 ವಾರ್ಡ್‌ಗಳ ಪೈಕಿ 53ನ್ನು ಗೆದ್ದುಕೊಳ್ಳುವ ಮೂಲಕ ಬಿಜೆಪಿ ಜಯಭೇರಿ ಬಾರಿಸಿದೆ. ಆದರೆ ಲಡಾಖ್ ಪ್ರದೇಶದಲ್ಲಿ ಒಂದೂ ಸ್ಥಾನವನ್ನು ಗೆಲ್ಲುವಲ್ಲಿ ವಿಫಲಗೊಂಡಿದೆ.

ಅನಂತನಾಗ್,ಕುಲ್ಗಾಮ್,ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳ 20 ಸ್ಥಳೀಯ ಸಂಸ್ಥೆಗಳ ಪೈಕಿ ಕನಿಷ್ಠ ನಾಲ್ಕನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದೇ ವೇಳೆ ಈವರೆಗೆ ಪ್ರಕಟಿತ ದಕ್ಷಿಣ ಕಾಶ್ಮೀರದ 94 ವಾರ್ಡ್‌ಗಳ ಫಲಿತಾಂಶಗಳಲ್ಲಿ 28 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಕನಿಷ್ಠ ಮೂರು ಸ್ಥಳೀಯ ಸಂಸ್ಥೆಗಳ ಮೇಲೆ ನಿಯಂತ್ರಣವನ್ನು ಸಾಧಿಸಿದೆ.

ಲಡಾಖ್ ಪ್ರದೇಶದ ಒಟ್ಟು 26 ವಾರ್ಡ್‌ಗಳ ಪೈಕಿ ಲೇಹ್ ನಗರಸಭೆಯ ಎಲ್ಲ 13 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ನೆರೆಯ ಕಾರ್ಗಿಲ್ ಜಿಲ್ಲೆಯಲ್ಲಿ ಐದು ವಾರ್ಡ್‌ಗಳನ್ನು ಅದು ಗೆದ್ದುಕೊಂಡಿದೆ.

ಲಡಾಖ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಥುಪ್‌ಸ್ತಾನ್ ಛೆವಾಂಗ್ ಪ್ರತಿನಿಧಿಸುತ್ತಿದ್ದಾರೆ,ಆದರೆ 2014ರಲ್ಲಿ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಸಂಸದೀಯ ಕ್ಷೇತ್ರದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿತ್ತು. ಇನ್ನೊಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿಯ ಪಾಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News