ಪದವೀಧರ ಶಿಕ್ಷಕರ ನೇಮಕಾತಿ ಸಂಬಂಧ ಮೀಸಲಾತಿ ಕುರಿತ ಆದೇಶ

Update: 2018-10-20 17:04 GMT

ಬೆಂಗಳೂರು, ಅ.20 : ರಾಜ್ಯದ ಸರಕಾರಿ ಶಾಲೆಯ 6ರಿಂದ 8ನೇ ತರಗತಿಯಲ್ಲಿ ಖಾಲಿ ಇರುವ ಹತ್ತು ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮೀಸಲಾತಿ ಕುರಿತು ಆದೇಶ ಹೊರಡಿಸಿದೆ.

ಇತರ ಹಿಂದುಳಿದ ವರ್ಗಗಳಿಗೆ ಗುರುತಿಸಲ್ಪಟ್ಟ, ಆದರೆ ಆಯಾ ಪ್ರವರ್ಗಗಳ ಅರ್ಹ ಅಭ್ಯರ್ಥಿಗಳ ಲಭ್ಯತೆ ಕೊರತೆಯಿಂದ ಭರ್ತಿ ಮಾಡಲಾಗದ ಸ್ಥಾನಗಳನ್ನು ಬ್ಯಾಕ್‌ಲಾಗ್ ಎಂದು ಪರಿಗಣಿಸಿ ಮುಂದುವರಿಸಬೇಕು. ಈ ಸ್ಥಾನಗಳನ್ನು ಮೀಸಲಾತಿಯಿಂದ ವಿಮುಕ್ತಿಗೊಳಿಸುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಮುಂದಿನ ನೇರ ನೇಮಕಾತಿ ಸಂದರ್ಭದಲ್ಲಿ ಹೊಸದಾಗಿ ಲಭ್ಯವಾದ ಸ್ಥಾನ ಮತ್ತು ಬ್ಯಾಕ್‌ಲಾಗ್ ಸ್ಥಾನಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಬೇಕು. ಹೊಸದಾಗಿ ಲಭ್ಯವಾದ ಸ್ಥಾನವನ್ನು ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ವರ್ಗೀಕರಣ ಮಾಡಿ ಪ್ರಕಟಿಸಬೇಕು. ಆದರೆ, ಬ್ಯಾಕ್‌ಲಾಗ್ ಸ್ಥಾನಗಳನ್ನು ಮತ್ತೊಮ್ಮೆ ವರ್ಗೀಕರಣ ಮಾಡುವಂತಿಲ್ಲ. 2015ರ ಫೆ.5ರಂದು ಹೊರಡಿಸಿದ್ದ ಆದೇಶದಲ್ಲಿ ತಿಳಿಸಿರುವಂತೆ ನೇರ ನೇಮಕಾತಿಯಲ್ಲಿ ಇತರ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳ ಕೊರತೆಯಿಂದ ಭರ್ತಿ ಮಾಡದೆ ಮುಂದಕ್ಕೆ ಕೊಂಡೊಯ್ಯಲಾದ ಸ್ಥಾನಗಳಿಗೂ ಈ ಆದೇಶ ಅನ್ವಯಿಸುತ್ತದೆ ಎಂದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News