ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿಸಿದ ತೃಪ್ತಿ ಇದೆ: ಅಣ್ಣಾಮಲೈ

Update: 2018-10-20 18:35 GMT

ಚಿಕ್ಕಮಗಳೂರು, ಅ.20: ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯನ್ನಾಗಿಸಿದ ಸಂತೃಪ್ತಿ ತಮಗಿದೆ ಎಂದು ಇತ್ತೀಚೆಗೆ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಇಲ್ಲಿನ ಪೊಲೀಸ್ ವರಿಷ್ಟಾಧಿಕಾರಿ ಕೆ.ಅಣ್ಣಾಮಲೈ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಶನಿವಾರ ತಮ್ಮ ಸ್ವಗೃಹದಲ್ಲಿ ಪತ್ರಕರ್ತರೊಂದಿಗಿನ ಸೌಹಾರ್ದ ಚಹಾಕೂಟದ ಸಂದರ್ಭದಲ್ಲಿ ತಮ್ಮ ಅನುಭವಗಳ ಬಗ್ಗೆ ಮಾತನಾಡಿದ ಅಣ್ಣಾಮಲೈ, ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ತಮಗೆ ಸಹಕರಿಸಿದ ಎಲ್ಲಾ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಆಭಾರಿಯಾಗಿದ್ದೇನೆ. ಜಿಲ್ಲೆಯಲ್ಲಿ ತಮ್ಮ ಅಧಿಕಾರವಧಿಯಲ್ಲಿ ಜನಸಾಮಾನ್ಯರು ತಮ್ಮ ವೈಯಕ್ತಿಕ ಸಮಸ್ಯೆಗಳೊಂದಿಗೆ ತಮ್ಮನ್ನು ಭೇಟಿಮಾಡಿದ ಸಂದರ್ಭದಲ್ಲಿ ಅವರಿಗೆ ಸಾಂತ್ವನ ಹೇಳಿರುವುದೂ ಸೇರಿದಂತೆ ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಪಟ್ಟಿದ್ದೇನೆ. ಅದರೊಂದಿಗೆ ತಾನೊಬ್ಬ ಅಧಿಕಾರಿಯಾಗಿ ವಿದ್ಯಾರ್ಥಿನಿಯರಿಗೆ ಮತ್ತು ಸಂಕಷ್ಟದಲ್ಲಿರುವ ವಿಧವಾ ಮಹಿಳೆಯರು ಮತ್ತು ಅಬಲೆಯರಿಗೆ ನೆರವು ನೀಡಿದ ಆತ್ಮತೃಪ್ತಿ ಇದೆ ಎಂದರು.

ತಮ್ಮ ಕಾರ್ಯಾವಧಿಯ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿ ವರ್ಗಕ್ಕೆ ರಕ್ಷಣಾತ್ಮಕವಾಗಿ ಕಾರ್ಯ ನಿರ್ವಹಿಸಿದ್ದೇನೆ. ಯಾವುದೇ ಅಧಿಕಾರಿ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಅವರಿಗೆ ನೆರವು ನೀಡುವ ಕೆಲಸವನ್ನು ಮಾಡಿದ್ದೇನೆ ಎಂದ ಅವರು, ತಪ್ಪಿತಸ್ಥರನ್ನು ದಂಡಿಸಿ, ಖಂಡಿಸುವ ಮೂಲಕ ಅವರನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ನಗರಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ನೂತನವಾಗಿ ಕಟ್ಟುವ ಕಟ್ಟಡಗಳಿಗೆ ನಗರಸಭೆಯಿಂದ ಪರವಾನಿಗೆ ನೀಡುವ ಸಂದರ್ಭದಲ್ಲಿ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಮತ್ತು ಕಟ್ಟಡಗಳ ನಿಯಮ ಉಲ್ಲಂಘನೆಯಾಗದಂತೆ ಎಚ್ಚರಿಸಬೇಕಾದ ನಗರಸಭೆ ಆಡಳಿತ ಈ ಬಗ್ಗೆ ಗಮನಹರಿಸದಿರುವುದು ತಮ್ಮ ಮನಸ್ಸಿಗೆ ನೋವುಂಟುಮಾಡಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಭಾಗಶಃ ಕುಂಠಿತಗೊಂಡಿದೆ. ನಕ್ಸಲರು ತಮ್ಮ ಇರುವಿಕೆಯನ್ನು ಸಾಬೀತು ಪಡಿಸಲು ಕೆಲವೇ ಮಂದಿ ಗ್ರಾಮಗಳಿಗೆ ಭೇಟಿ ಮಾಡುತ್ತಿರುವುದು ತಮ್ಮ ಗಮನಕ್ಕೂ ಬಂದಿದೆ ಎಂದ ಅವರು, ನಕ್ಸಲ್ ಚಟುವಟಿಕೆ ಮೂಲೋತ್ಪಾಟನೆ ಮಾಡಲು ಬಂದೂಕು ನಳಿಕೆಯನ್ನು ಉಪಯೋಗಿಸಿದ್ದೇ ಆದರೆ ಅವರ ಮೇಲಿನ ಅನುಕಂಪದಿಂದ ಇನ್ನಷ್ಟು ಮನಸ್ಸುಗಳು ನಕ್ಸಲ್ ಚಟುವಟಿಕೆಯತ್ತ ಮನಸ್ಸು ಹರಿಸುವ ಅವಕಾಶಗಳಿವೆ. ಇದನ್ನು ತಡೆಯಲು ಅವರ ಚಟುವಟಿಕೆಗಳ ಬಗ್ಗೆ ಕಣ್ಣಿಟ್ಟು ಅವರ ಚಲನವಲನಗಳ ಬಗ್ಗೆ ಗಮನಹರಿಸಿ ನಕ್ಸಲ್ ಕಾರ್ಯವ್ಯಾಪ್ತಿ ವಿಸ್ತರಣೆಯಾಗದಂತೆ ಎಚ್ಚರ ವಹಿಸಿದಲ್ಲಿ ಕ್ರಮೇಣ ಅವರ ಚಟುವಟಿಕೆಗಳು ನಶಿಸಿಹೋಗಬಹುದು ಎಂದು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News