ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲುವು: ಆರ್.ಅಶೋಕ್

Update: 2018-10-20 18:43 GMT

ಮಂಡ್ಯ, ಅ.20: ಮಂಡ್ಯ ಲೋಕಸಭಾ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಪರವಾಗಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಶನಿವಾರ ನಗರದ ವಿವಿಧೆಡೆ ಮತಯಾಚಿಸಿದರು.

ನಗರದ ರಾಘವೇಂದ್ರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದ ಅವರು, ವಿವಿ ರಸ್ತೆ, ಪೇಟೆಬೀದಿ, ಜೈನರ ಬೀದಿ ಸೇರಿದಂತೆ ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಇದಕ್ಕೂ ಮುನ್ನ ಮುಖಂಡರ ಸಭೆ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಡ್ಯ ಸೇರಿದಂತೆ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮಂಡ್ಯದಲ್ಲಿ ಜೆಡಿಎಸ್ ವಿರೋಧಿ ಅಲೆಯಿದ್ದು, ಬಿಜೆಪಿಗೆ ಅನುಕೂಲವಾಗಲಿದೆ ಎಂದರು.

ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಶಿವಮೊಗ್ಗದಲ್ಲಿ ಅಭ್ಯರ್ಥಿ ಇಲ್ಲದೆ ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವುದೇ ಇದಕ್ಕೆ ಸಾಕ್ಷಿ. ಶಿವಮೊಗ್ಗ ಉಪಚುನಾವಣೆ ದೇಶದಲ್ಲಿ ಕಾಂಗ್ರೆಸ್ ಧೂಳಿಪಟಕ್ಕೆ ವೇದಿಕೆಯಾಗಲಿದೆ ಎಂದು ವ್ಯಂಗ್ಯವಾಡಿದರು.

ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮಾತ್ರ ಫೈಟ್ ಇದೆ. ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿ ಪಕ್ಷದ ಮುಖಂಡರ ನೇತೃತ್ವದಲ್ಲಿ ಭೂತ್‍ಗಳಿಗೆ ಸಮಿತಿ ರಚಿಸಲಾಗಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ದೋಸ್ತಿ ಸರಕಾರ ಹೆಚ್ಚುದಿನ ಉಳಿಯುವುದಿಲ್ಲ. ದೋಸ್ತಿಗಳ ಜಗಳ ತಾರಕಕ್ಕೇರಲಿದೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರು ಹೇಳಿದರು.

ಅ.22ರಂದು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತ ಕೇಳಲಿದ್ದಾರೆ. ಅ.23 ಮತ್ತು 26ರಂದು ಯಡಿಯೂರಪ್ಪ ಎಲ್ಲಾ ತಾಲೂಕು ಕೇಂದ್ರಗಳಿಗೂ ಪ್ರಚಾರಕ್ಕಾಗಿ ಆಗಮಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ವೀರಶೈವ ಧರ್ಮ ಒಡೆಯುವ ವಿಚಾರದಲ್ಲಿ ಸಿದ್ದರಾಮಯ್ಯ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದರೆಂದು ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ತಪ್ಪೊಪ್ಪಿಗೆ ಪತ್ರವನ್ನು ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ವೀರಶೈವ ಅಷ್ಟೇ ಅಲ್ಲ ಬೇರೆ ಬೇರೆ ಜಾತಿ ಒಡೆದ ಹಣೆಪಟ್ಟಿ ಹೋಗಲ್ಲ ಎಂದು ಅವರು ಟೀಕಿಸಿದರು.

ಶಾಸಕ ನಾಗೇಂದ್ರ, ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಶಾಸಕರಾದ ಡಿ.ಎಸ್.ವೀರಯ್ಯ, ಅಶ್ವತ್‍ ನಾರಾಯಣ, ಜಿಪಂ ಸದಸ್ಯ ಎನ್.ಶಿವಣ್ಣ, ನಗರಸಭೆ ಸದಸ್ಯ ಅರುಣ್‍ಕುಮಾರ್, ಅಬ್ದುಲ್ ಅಝೀಮ್, ಕೆ.ಎಸ್.ನಂಜುಂಡೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News