ಇಂದು ಗುವಾಹಟಿಯಲ್ಲಿ ಭಾರತ-ವಿಂಡೀಸ್ ಮೊದಲ ಏಕದಿನ

Update: 2018-10-20 18:44 GMT

ಗುವಾಹಟಿ, ಅ.20: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯ ಗುವಾಹಟಿಯಲ್ಲಿ ರವಿವಾರ ನಡೆಯಲಿದೆ.

ಐದು ಪಂದ್ಯಗಳ ಸರಣಿಯು 2019ರ ವಿಶ್ವಕಪ್‌ನ ತಯಾರಿಗೆ ನೆರವಾಗಲಿದೆ. ಇನ್ನು ವಿಶ್ವಕಪ್‌ಗೆ 8 ತಿಂಗಳು ಬಾಕಿ ಉಳಿದಿದೆ. ಟೀಮ್ ಇಂಡಿಯಾದಲ್ಲಿ ಅಗ್ರ ಸರದಿ ಚೆನ್ನಾಗಿದೆ. ಆದರೆ ಮಧ್ಯಮ ಸರದಿಯ ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ದೊಡ್ಡ ಚಿಂತೆಯಾಗಿದೆ. ನಂ.4 ಕ್ರಮಾಂಕಕ್ಕೆ ಸಮರ್ಥ ಆಟಗಾರನಿಗೆ ಶೋಧ ಮುಂದುವರಿದಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ನಾಯಕ ವಿರಾಟ್ ಕೊಹ್ಲಿ ವಾಪಸಾಗಿದ್ದಾರೆ. ಅವರು ಏಶ್ಯ ಕಪ್‌ನಲ್ಲಿ ಆಡಿರಲಿಲ್ಲ. ರೋಹಿತ್ ಶರ್ಮಾ ನಾಯಕರಾಗಿ ಏಶ್ಯಕಪ್‌ನಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಟೀಮ್ ಇಂಡಿಯಾ ಅಜೇಯವಾಗಿ ಫೈನಲ್ ತಲುಪಿ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಇದೀಗ ಕೊಹ್ಲಿ ತಂಡದ ನಾಯಕತ್ವವನ್ನು ಮತ್ತೆ ವಹಿಸಿಕೊಂಡಿದ್ದಾರೆ.

ಟೆಸ್ಟ್‌ನಲ್ಲಿ ಮಿಂಚುತ್ತಿರುವ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಂಡೀಸ್ ವಿರುದ್ಧ ಏಕದಿನ ಪಂದ್ಯ ಆಡುವ ಮೂಲಕ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.

 21ರ ಹರೆಯದ ಪಂತ್ ಇಂಗ್ಲೆಂಡ್ ವಿರುದ್ಧ ದ ಟೆಸ್ಟ್ ಸರಣಿಯಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು. ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಪಂತ್ ವಿಂಡೀಸ್ ವಿರುದ್ಧ 2 ಟೆಸ್ಟ್‌ಗಳಲ್ಲೂ ತಲಾ 92 ರನ್ ಗಳಿಸಿ ಎರಡು ಬಾರಿ ಶತಕದಂಚಿನಲ್ಲಿ ಎಡವಿದ್ದಾರೆ. ಇದೀಗ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ಪರೀಕ್ಷಿಸಲಿದ್ದಾರೆ. ಪಂತ್ ಪ್ರವೇಶದಿಂದಾಗಿ ದಿನೇಶ್ ಕಾರ್ತಿಕ್‌ಗೆ ಅವಕಾಶ ದೂರವಾಗಿದೆ.

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ಮೊದಲ ಆದ್ಯತೆಯ ವಿಕೆಟ್ ಕೀಪರ್. ಅವರು 2019ರ ವಿಶ್ವಕಪ್ ತಂಡದಲ್ಲಿರುವುದನ್ನು ನಿರೀಕ್ಷಿಸಲಾಗಿದೆ. ಒಂದು ವೇಳೆ ಧೋನಿ ವಿಶ್ವಕಪ್ ಮುಗಿದ ಬೆನ್ನಲ್ಲೇ ಕ್ರಿಕೆಟ್‌ಗೆ ವಿದಾಯ ಹೇಳಿದರೆ ತೆರವಾಗುವ ಸ್ಥಾನವನ್ನು ತುಂಬುವ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ರಿಷಭ್ ಪಂತ್ ಅವರು ಧೋನಿಯ ಉತ್ತರಾಧಿಕಾರಿಯಾಗುವ ಎಲ್ಲ ಅರ್ಹತೆ ಹೊಂದಿದ್ದಾರೆ. ಧೋನಿ ಬ್ಯಾಟಿಂಗ್ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ಉತ್ತಮವಾಗಿಲ್ಲ. ಅವರು 4 ಇನಿಂಗ್ಸ್‌ಗಳಲ್ಲಿ 19.25 ಸರಾಸರಿಯಂತೆ 77 ರನ್ ಸೇರಿಸಿದ್ದಾರೆ. 2018ರಲ್ಲಿ 15 ಪಂದ್ಯಗಳನ್ನು ಆಡಿರುವ ಧೋನಿಗೆ 10 ಪಂದ್ಯಗಳಲ್ಲಿ ಬ್ಯಾಟಿಂಗ್ ಅವಕಾಶ ಸಿಕ್ಕಿದೆ. 28.12 ಸರಾಸರಿಯಂತೆ ರನ್ ದಾಖಲಿಸಿದ್ದಾರೆ. ಅವರು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಇನ್ನೂ ಶತಕ ದಾಖಲಿಸಿಲ್ಲ. ಅಂಬಟಿ ರಾಯುಡು ನಂ.4 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ಕಳೆದ ಏಶ್ಯಕಪ್‌ನಲ್ಲಿ ರಾಯುಡು 43.75 ಸರಾಸರಿಯಂತೆ 6 ಇನಿಂಗ್ಸ್ ಗಳಲ್ಲಿ 175 ರನ್ ದಾಖಲಿಸುವ ಮೂಲಕ ಉತ್ತಮ ಫಾರ್ಮ್ ನಲ್ಲಿದ್ದಾರೆ. ಮನೀಷ್ ಪಾಂಡೆ ತಂಡಕ್ಕೆ ಪ್ರವೇಶ ಪಡೆದು ಮೂರು ವರ್ಷವಾಗಿದ್ದರೂ ಇನ್ನೂ ತಂಡದಲ್ಲಿ ಸ್ಥಾನ ಭದ್ರಪಡಿಸಿಲ್ಲ.

 ಆಲ್‌ರೌಂಡರ್ ರವೀಂದ್ರ ಜಡೇಜ ಕೆಳಗಿನ ಕ್ರಮಾಂಕದಲ್ಲಿ ಆಡಲಿದ್ದಾರೆ. ಗಾಯಾಳು ಹಾರ್ದಿಕ್ ಪಾಂಡ್ಯ ಬದಲಿಗೆ ತಂಡ ಸೇರ್ಪಡೆಗೊಂಡಿರುವ ಜಡೇಜ ವರ್ಷದ ಬಳಿಕ ಏಕದಿನ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

  ಭುವನೇಶ್ವರ್ ಕುಮಾರ್ ಮತ್ತು ಜಸ್‌ಪ್ರೀತ್ ಬುಮ್ರಾಗೆ ಮೊದಲ ಎರಡು ಏಕದಿನ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಅನುಪಸ್ಥಿತಿಯಲ್ಲಿ ವೇಗದ ಬೌಲರ್‌ಗಳಾದ ಮುಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ತಂಡದ ದಾಳಿಯನ್ನು ಆರಂಭಿಸಲಿದ್ದಾರೆ. ಕುಲ್ ದೀಪ್ ಯಾದವ್ ಮತ್ತು ಯಜುವೇಂದ್ರ ಚಹಾಲ್ ತಂಡದಲ್ಲಿದ್ದಾರೆ.

ಎಡಗೈ ವೇಗಿ ಖಲೀಲ್ ಅಹ್ಮದ್ ಏಶ್ಯಕಪ್‌ನ ಎರಡು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

   ಪ್ರವಾಸಿ ವೆಸ್ಟ್‌ಇಂಡೀಸ್ ತಂಡ ಟೆಸ್ಟ್‌ಗಿಂತ ಏಕದಿನ ಕ್ರಿಕೆಟ್‌ನಲ್ಲಿ ಬಲಿಷ್ಠವಾಗಿದೆ. ಆರಂಭಿಕ ದಾಂಡಿಗ ಎವಿನ್ ಲೂವಿಸ್ ವೈಯಕ್ತಿಕ ಕಾರಣಗಳಿಗಾಗಿ ಭಾರತ ವಿರುದ್ಧದ ಏಕದಿನ ಸರಣಿಯಿಂದ ದೂರವಾಗಿದ್ದಾರೆ. ಕ್ರಿಸ್ ಗೇಲ್ ಮತ್ತು ಆ್ಯಂಡ್ರೆ ರಸೆಲ್ ಸೇವೆಯಿಂದ ತಂಡ ವಂಚಿತಗೊಂಡಿದೆ. ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ತಂಡದ ಕೋಚ್ ಸ್ಟುವರ್ಟ್ ಲಾ ಅವರಿಗೆ ಮೊದಲ ಎರಡು ಪಂದ್ಯಗಳಿಗೆ ಡ್ರೆಸ್ಸಿಂಗ್ ರೂಂ ಪ್ರವೇಶ ಬಂದ್ ಆಗಿದೆ.

ವಿಂಡೀಸ್ ತಂಡದಲ್ಲಿ ಮರ್ಲಾನ್ ಸ್ಯಾಮುಯೆಲ್ಸ್, ನಾಯಕ ಆಲ್‌ರೌಂಡರ್ ಜೇಸನ್ ಹೋಲ್ಡರ್ ಮತ್ತು ವೇಗಿ ಕೇಮರ್ ರೋಚ್ ತಂಡದಲ್ಲಿದ್ದಾರೆ. ಯುವ ಆಟಗಾರರಾದ ಆರಂಭಿಕ ದಾಂಡಿಗ ಚಂದ್ರಪಾಲ್ ಹೆಮ್‌ರಾಜ್, ಆಲ್‌ರೌಂಡರ್ ಫಾಬಿಯನ್ ಆ್ಯಲೆನ್ ಮತ್ತು ವೇಗಿ ಒಶಾನೆ ಥಾಮಸ್ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ವೆಸ್ಟ್‌ಇಂಡೀಸ್ ತಂಡ 2014ರಿಂದ ಒಂದು ಸರಣಿಯನ್ನ್ನೂ ಜಯಿಸಿಲ್ಲ. ಕೊನೆಯ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು.

ಬರ್ಸಾಪಾರಾ ಸ್ಟೇಡಿಯಂನಲ್ಲಿ ಎರಡನೇ ಅಂತರ್‌ರಾಷ್ಟ್ರೀಯ ಪಂದ್ಯ ಆಯೋಜಿಸಲಾಗುತ್ತಿದೆ. ಕಳೆದ ವರ್ಷ ಇಲ್ಲಿ ಆಸ್ಟ್ರೇಲಿಯ ವಿರುದ್ಧ ಟ್ವೆಂಟಿ-20 ಪಂದ್ಯವನ್ನು ಆಯೋಜಿಸಲಾಗಿತ್ತು.

ಭಾರತ

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ , ಶಿಖರ್ ಧವನ್, ಅಂಬಟಿ ರಾಯುಡು, ಎಂಎಸ್ ಧೋನಿ(ವಿಕೆಟ್ ಕೀಪರ್), ರಿಷಭ್ ಪಂತ್,ರವೀಂದ್ರ ಜಡೇಜ, ಯಜುವೇಂದ್ರ ಚಹಾಲ್, ಕುಲ್‌ದೀಪ್ ಯಾದವ್, ಮುಹಮ್ಮದ್ ಶಮಿ, ಖಲೀಲ್ ಯಾದವ್ , ಉಮೇಶ್ ಯಾದವ್.

ವೆಸ್ಟ್ ಇಂಡೀಸ್

ಜೇಸನ್ ಹೋಲ್ಡರ್(ನಾಯಕ), ಫಾಬಿಯನ್ ಆ್ಯಲೆನ್, ಸುನೀಲ್ ಅಂಬ್ರಿಸ್, ದೇವೇಂದ್ರ ಬಿಶೊ, ಚಂದ್ರಪಾಲ್ ಹೆಮ್‌ರಾಜ್,ಶಿಮ್ರಿನ್ ಹೆಟ್ಮೆರ್, ಶಾಯಿ ಹೋಪ್, ಅಲ್ಝಾರಿ ಜೋಸೆಫ್, ಕೀರನ್ ಪೋವೆಲ್, ಆಶ್ಲೆ ನರ್ಸ್, ಕೀಮೊ ಪಾಲ್, ರೊವ್‌ಮಾನ್ ಪೊವೆಲ್, ಕೇಮರ್ ರೂಚ್, ಮರ್ಲಾನ್ ಸ್ಯಾಮುಯೆಲ್ಸ್, ಒಶಾನೆ ಥಾಮಸ್, ಒಬೆಡ್ ಮೆಕಾಯ್.

ಪಂದ್ಯದ ಸಮಯ ಅಪರಾಹ್ನ 1:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News