ಪಕ್ಷದ ರಾಜ್ಯ ಘಟಕ ವಿಸರ್ಜಿಸಿ: ಗೋವಾ ಬಿಜೆಪಿ ಮುಖಂಡರ ಆಕ್ರೋಶ

Update: 2018-10-21 03:57 GMT

ಪಣಜಿ, ಅ. 21: ಗೋವಾದಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಭುಗಿಲೆದ್ದಿದೆ. ಪಕ್ಷದ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಂಗ್ರೆಸ್ ಶಾಸಕರಾದ ಸುಭಾಷ್ ಶಿರೋಡ್ಕರ್ ಮತ್ತು ದಯಾನಂದ ಸೋಪ್ಟೆ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಬಗ್ಗೆ ಬಿಜೆಪಿ ಮುಖಂಡರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಪಕ್ಷದ ಸ್ಥಳೀಯ ಮುಖಂಡರು ಪ್ರಾಮಾಣಿಕ ಕಾರ್ಯಕರ್ತರಿಗೆ ದ್ರೋಹ ಬಗೆದಿದ್ದಾರೆ. ಆದ್ದರಿಂದ ಪಕ್ಷದ ರಾಜ್ಯ ಘಟಕವನ್ನು ವಿಸರ್ಜಿಸಬೇಕು" ಎಂದು ಮುಖಂಡರು ಆಗ್ರಹಿಸಿದ್ದಾರೆ.

ರಾಜ್ಯ ಬಿಜೆಪಿ ಘಟಕದ ಸಂಸ್ಥಾಪಕ ಸದಸ್ಯರಾದ ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್, ಮಾಜಿ ಸ್ಪೀಕರ್ ರಾಜೇಂದ್ರ ಅರ್ಲೇಕರ್, ಮಾಜಿ ಸಚಿವ ದಯಾನಂದ ಮಾಂಡ್ರೇಕರ್ ಅವರು ಈ ಆಗ್ರಹ ಮಂಡಿಸಿದ್ದಾರೆ. ಹಾಲಿ ಅಧ್ಯಕ್ಷ ವಿಜಯ್ ತೆಂಡೂಲ್ಕರ್ ಬದಲಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕು ಮತ್ತು ಪಕ್ಷದ ಕೋರ್ ಕಮಿಟಿಯನ್ನು ಕೂಡಾ ಪುನರ್ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಮೂವರು ಮುಖಂಡರು ಒಂಬತ್ತು ಮಂದಿ ಸದಸ್ಯರ ಕೋರ್ ಕಮಿಟಿಯಲ್ಲಿದ್ದು, ಸಮಿತಿಯ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೇಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ದುರ್ಲಾಭ ಪಡೆಯಲು ಒಂದಿಬ್ಬರು ಹುನ್ನಾರ ನಡೆಸಿದ್ದಾರೆ ಎಂದು ಪಾರ್ಸೇಕರ್ ಹೇಳಿದ್ದಾರೆ.

"ಬಿಜೆಪಿ ಕಾರ್ಯಕರ್ತರ ಪಕ್ಷ. ಸಂಘಟನೆಯನ್ನು ಬಲಗೊಳಿಸುವ ವ್ಯಕ್ತಿ ನಮಗೆ ಬೇಕು. ಪೂರ್ಣಾವಧಿ ಸಂಘಟನಾ ಕಾರ್ಯದರ್ಶಿ ಹಾಗೂ ಪೂರ್ಣಾವಧಿ ರಾಜ್ಯಾಧ್ಯಕ್ಷ ಬೇಕು" ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ತೆಂಡೂಲ್ಕರ್ ಅವರು ರಾಜ್ಯಸಭಾ ಸದಸ್ಯರಾಗಿದ್ದರೆ, ರಾಜ್ಯ ಪ್ರಧಾನ ಸಂಘಟನಾ ಕಾರ್ಯದರ್ಶಿ ವಿಜಯ್ ಪುರಾಣಿಕ್ ಅವರು ಮಹಾರಾಷ್ಟ್ರದ ಉಸ್ತುವಾರಿ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News