ಮಡಿಕೇರಿ: ಬೇಟೆಗೆ ತೆರಳಿದ ಯುವಕ ಗುಂಡೇಟಿಗೆ ಬಲಿ

Update: 2018-10-22 14:12 GMT
ರಂಜಿತ್

ಮಡಿಕೇರಿ, ಅ.22: ಕಾಡು ಪ್ರಾಣಿಯ ಬೇಟೆಗಾಗಿ ತೆರಳಿದ ಸಂದರ್ಭ ಆಕಸ್ಮಿಕವಾಗಿ ಗುಂಡೇಟು ತಗುಲಿ ಸಂಶಯಾಸ್ಪದ ರೀತಿಯಲ್ಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಕ್ಕಂದೂರು ಸಮೀಪದ ಹೆಮ್ಮತ್ತಾಳು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಅಯ್ಯಕುಟ್ಟೀರ ದೇವಯ್ಯ ಎಂಬವರ ಪುತ್ರ ರಂಜಿತ್(32) ಎಂಬುವವರೆ ಮೃತ ವ್ಯಕ್ತಿ. ಬೇಟೆಗೆಂದು ಜೊತೆಯಲ್ಲಿ ತೆರಳಿದ ಕಾಳಿಮಾಡ ದಿನೇಶ್ (40) ಎಂಬಾತ ಘಟನೆ ನಡೆದ ಬಳಿಕ ಬಂದೂಕು ಬಿಟ್ಟು ತಲೆ ಮರೆಸಿಕೊಂಡಿದ್ದಾನೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೆಮ್ಮೆತ್ತಾಳು ಗ್ರಾಮದ ನಿವಾಸಿ ಅಯ್ಯಕುಟ್ಟೀರ ರಂಜಿತ್ ಮತ್ತು ದಕ್ಷಿಣ ಕೊಡಗಿನ ಶ್ರಿಮಂಗಲ ವೆಸ್ಟ್‍ನೆಮ್ಮೆಲೆ ಗ್ರಾಮದ ನಿವಾಸಿ ಕಾಳಿಮಾಡ ದಿನೇಶ್ ಅವರುಗಳು ಕುಟುಂಬ ಸಂಬಂಧಿಕರಾಗಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ರಜೆಯಿದ್ದ ಹಿನ್ನೆಲೆಯಲ್ಲಿ ಕಾಳಿಮಾಡ ದಿನೇಶ್ ಅಯ್ಯಕುಟ್ಟೀರ ರಂಜಿತ್ ಅವರ ಮನೆಗೆ ಬಂದಿದ್ದರು ಎನ್ನಲಾಗಿದೆ. ಅ.21ರ ಸಂಜೆ ರಂಜಿತ್ ಹಾಗೂ ದಿನೇಶ್ ಈರ್ವರು ತಮ್ಮ-ತಮ್ಮ ಬಂದೂಕಿನೊಂದಿಗೆ ಕಾಡುಪ್ರಾಣಿಯ ಬೇಟೆಗೆ ಹೊರಟಿದ್ದರು. ಆದರೆ ದಾರಿ ಮಧ್ಯೆ ಇಬ್ಬರು ಪ್ರತ್ಯೇಕವಾಗಿ ಬೇಟೆಯಾಡಲು ತೆರಳಿದ್ದಾರೆ ಎನ್ನಲಾಗಿದ್ದು, ರಾತ್ರಿ ವೇಳೆ ತೋಟದ ನಡುವೆ ಗುಂಡಿನ ಸದ್ದು ಕೇಳಿಸಿದೆ. ಗುಂಡಿನ ಶಬ್ಧ ಕೇಳಿ ಬಂದ ಕಡೆ ತೆರಳಿದ ಅಯ್ಯಕುಟ್ಟೀರ ರಂಜಿತ್ ಅವರ ತಂದೆ ದೇವಯ್ಯ ಮಗ ಸತ್ತು ಬಿದ್ದಿರುವುದನ್ನು ಕಂಡು ರೋಧಿಸಿದ್ದಾರೆ.

ಈ ಬಗ್ಗೆ ಜೊತೆಯಲ್ಲೇ ಮನೆಯಿಂದ ಬೇಟೆಗೆ ತೆರಳಿದ ಕಾಳಿಮಾಡ ದಿನೇಶ್‍ನನ್ನು ವಿಚಾರಿಸಿದ ಸಂದರ್ಭ ರಂಜಿತ್ ಕಾಲು ಜಾರಿ ಬರೆಯಿಂದ ಬೀಳುವ ಸಂದರ್ಭ ಬಂದೂಕಿನಿಂದ ಗುಂಡು ಸಿಡಿದು ಮೃತ ಪಟ್ಟಿರುವುದಾಗಿ ಹೇಳಿದ್ದಾನೆ. ರಂಜಿತ್ ಕುಟುಂಬಸ್ಥರು ಮೃತದೇಹವನ್ನು ಮನೆಗೆ ತಂದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಮೃತನ ತಂದೆ ಅಯ್ಯಕುಟ್ಟೀರ ದೇವಯ್ಯ ನೀಡಿದ ದೂರಿನಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಳಿಮಾಡ ದಿನೇಶ್ ಬೇಟೆಗಾಗಿ ಬಳಸಿದ ಬಂದೂಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಯ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಮೃತ ರಂಜಿತ್ ಅವಿವಾಹಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News