ಸದನದಲ್ಲಿ ಒಂದಕ್ಷರ ಮಾತನಾಡದವರನ್ನೇಕೆ ಲೋಕಸಭೆಗೆ ಕಳುಹಿಸಬೇಕು?: ಸಿದ್ದರಾಮಯ್ಯ

Update: 2018-10-22 13:09 GMT

ಬಳ್ಳಾರಿ, ಅ. 22: ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಮಾತನಾಡಿಲ್ಲ. ಇಲ್ಲಿನ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರೂ ಈ ಹಿಂದೆ ಲೋಕಸಭೆಯಲ್ಲಿ ಒಮ್ಮೆಯೂ ಮಾತನಾಡಿಲ್ಲ. ಅಲಂಕಾರಕ್ಕೆ ಅವರನ್ನು ಅಲ್ಲಿಗೆ ಸಂಸತ್‌ಗೆ ಕಳುಹಿಸಬೇಕೇ? ಎಂದು ಮಾಜಿ ಸಿಎಂ ಸಿದ್ಧರಾಮಯ್ಯ, ಮತದಾರರನ್ನು ಪ್ರಶ್ನಿಸಿದ್ದಾರೆ.

ಸೋಮವಾರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಗ್ರಪ್ಪನವರನ್ನು ಹೊರಗಿನವರು ಎಂದು ಹೇಳುವುದಾದರೆ ಶ್ರೀರಾಮುಲು ಬಾದಾಮಿಯಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿರಲಿಲ್ಲವೇ? ಅವರೇನು ಬಾದಾಮಿಯಲ್ಲಿ ಜನಿಸಿದವರೇ? ಎಂದು ಕೇಳಿದರು.

ಉಗ್ರಪ್ಪ ಹೊರಗಿನವರೆಂದು ಹೇಳುವ ಶ್ರೀರಾಮುಲು, ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಯಾವ ಊರಿನ ಸೊಸೆ ಎಂಬುದನ್ನು ಹೇಳಬೇಕೆಂದು ಆಗ್ರಹಿಸಿದ ಸಿದ್ದರಾಮಯ್ಯ, ಶ್ರೀರಾಮುಲು ಕಣ್ಣು ಬಿಡುವ ಮೊದಲೇ ಉಗ್ರಪ್ಪನವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದವರು ಎಂದು ಹೇಳಿದರು.

ಉಗ್ರಪ್ಪ ಅವರು ಲೋಕಸಭೆಗೆ ಹೋದರೆ ಅಲ್ಲಿ ಬಳ್ಳಾರಿ ಜಿಲ್ಲೆಯ ಸದ್ದು ಹೊಸದಿಲ್ಲಿಯಲ್ಲಿ ಮೊಳಗಲಿದೆ. ಆದರೆ, ಜೆ.ಶಾಂತಾ ಅವರು ದಿಲ್ಲಿಗೆ ಹೋದರೆ ಆ ಕೆಲಸ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದ ಅವರು, ಶ್ರೀರಾಮುಲು ಅವರಿಗೆ ಹೋಲಿಸಿದರೆ ರಾಜಕೀಯದಲ್ಲಿ ಉಗ್ರಪ್ಪನವರದ್ದು ಮೇರು ವ್ಯಕ್ತಿತ್ವ ಎಂದು ಬಣ್ಣಿಸಿದರು.

ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಯಾವುದೂ ಶ್ರೀರಾಮುಲುಗೆ ಗೊತ್ತಿಲ್ಲ. ಕೇವಲ ಹಣ, ಅಹಂಕಾರದಿಂದ ಅವರು ರಾಜಕೀಯ ನಡೆಸುವವರು ಎಂದು ಟೀಕಿಸಿದ ಅವರು, ರೈತರ ಸಾಲಮನ್ನಾ ಮಾಡಿ ಎಂದು ರಾಮುಲು ಒಂದು ದಿನವೂ ಲೋಕಸಭೆಯಲ್ಲಿ ಒತ್ತಾಯ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕನ್ನಡವೇ ಸರಿಯಾಗಿ ಮಾತನಾಡಲು ಬಾರದ ಶ್ರೀರಾಮುಲು ಅವರು ದಿಲ್ಲಿಯ ಸಂಸತ್‌ನಲ್ಲಿ ಅವರು ಏನು ಮಾತನಾಡಿಯಾರು? ರಾಜ್ಯ, ದೇಶ ಗೊತ್ತಿಲ್ಲದವರು ಲೋಕಸಭೆಗೆ ಏಕೆ ಹೋಗಬೇಕು? ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ಕೇಂದ್ರದಲ್ಲಿ ಬಿಜೆಪಿಯದ್ದೇ ಸರಕಾರವಿದೆ. ಶ್ರೀರಾಮುಲು ಒಂದಾದರೂ ಯೋಜನೆಯನ್ನು ಬಳ್ಳಾರಿಗೆ ತಂದಿದ್ದಾರೆಯೇ ಎಂದು ಟೀಕಿಸಿದರು. ಪ್ರಚಾರ ಕಾರ್ಯದಲ್ಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ, ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

‘ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಶ್ರೀರಾಮುಲು ಅವರಿಗೆ ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಸ್ಥಾನಮಾನ ಕಲ್ಪಿಸಿರುವ ಕಲಂ 371 ‘ಜೆ’ ಅಂದರೆ ಏನು ಅಂತ ಗೊತ್ತಿಲ್ಲ. ಆದರೆ, ಅವರಿಗೆ ಗೊತ್ತಿರುವುದೇನಿದ್ದರೂ ಐಪಿಸಿ ಸೆಕ್ಷನ್ 326, 307, 323, 420 ಮಾತ್ರ’

-ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News