ಬಿಷಪ್ ಫ್ರಾಂಕೋ ವಿರುದ್ಧ ಹೇಳಿಕೆ ನೀಡಿದ್ದ ಪಾದ್ರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2018-10-22 16:31 GMT

ಜಲಂಧರ್, ಅ. 22: ಕೇರಳದ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಜಲಂಧರ್‌ನ ಮಾಜಿ ಬಿಷಪ್ ಫ್ರಾಂಕೊ ಮುಳಕ್ಕಲ್ ವಿರುದ್ಧ ಹೇಳಿಕೆ ನೀಡಿದ್ದ ಹಿರಿಯ ಪಾದ್ರಿ ಫಾದರ್ ಕುರಿಯಕೋಸ್ ಕಟ್ಟುಥರಾ ಅವರ ಮೃತದೇಹ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಜಲಂಧರ್‌ನಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ‘‘ಇದು ನಿಗೂಢ, ಹಠಾತ್ ಸಾವು’’ ಎಂದು ವ್ಯಾಖ್ಯಾನಿಸಿ ಅವರ ಕುಟುಂಬ ಪೊಲೀಸ್ ದೂರು ದಾಖಲಿಸಿದೆ. ಅವರು ಜೀವ ಭೀತಿ ಎದುರಿಸುತ್ತಿದ್ದರು ಹಾಗೂ ಅವರ ಮೇಲೆ ಅದಾಗಲೇ ದಾಳಿ ನಡೆದಿತ್ತು ಎಂದು ಕುಟುಂಬ ಹೇಳಿದೆ.

ಫಾದರ್ ಕುರಿಯಕೋಸ್ ಕುಟ್ಟಥರಾ (62) ಅವರು ಸಂತ ಪೌಲ್ಸ್ ಚರ್ಚ್‌ನ ತನ್ನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹದಲ್ಲಿ ಯಾವುದೇ ಗಾಯ ಕಂಡು ಬಂದಿಲ್ಲ. ಆದರೆ, ಅವರು ರಕ್ತ ವಾಂತಿ ಮಾಡಿಕೊಂಡ ಚಿಹ್ನೆ ಕಂಡು ಬಂದಿದೆ. ರಕ್ತದೊತ್ತಡದ ಔಷಧ ಕೂಡ ಅವರ ಸಮೀಪ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಫಾದರ್ ಕುರಿಯಕೋಸ್ ಅವರ ಸಹೋದರ ಆಲಪ್ಪುಳದಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ‘‘ಬಿಷಪ್‌ನ ಸಹವರ್ತಿಗಳು ತನ್ನ ಸಹೋದರನಿಗೆ ಹಲವು ಬಾರಿ ಬೆದರಿಕೆ ಒಡ್ಡಿದ್ದಾರೆ. ಅವರ ಕಾರನ್ನು ಜಖಂಗೊಳಿಸಿದ್ದಾರೆ. ಜಲಂಧರ್‌ನಲ್ಲಿರುವ ಅವರ ಮನೆಗೆ ಕಲ್ಲೆಸೆದಿದ್ದಾರೆ. ಅನಪೇಕ್ಷಿತ ಪ್ರಭಾವ ಅಥವಾ ಬೆದರಿಕೆ ಮೂಲಕ ಪ್ರಕರಣದ ಸಾಕ್ಷಿಗಳನ್ನು ಮನವೊಲಿಸಲು ಬಿಷಪ್ ಪರವಾಗಿ ಅವರ ಸಂಬಂಧಿಕರು ಹಾಗೂ ಸಹವರ್ತಿಗಳು ಮಾಡಿದ ಉದ್ದೇಶಪೂರ್ವಕ ಕಾರ್ಯ ಇದಾಗಿದೆ.’’ ಎಂದು ಜೋಸ್ ಕುರಿಯನ್ ತಿಳಿಸಿದ್ದಾರೆ.

2013 ಹಾಗೂ 2016ರ ನಡುವೆ ಕೋಟ್ಟಾಯಂನಲ್ಲಿರುವ ಕಾನ್ವೆಂಟ್‌ಗೆ ಭೇಟಿ ನೀಡಿದ ಸಂದರ್ಭ ಫ್ರಾಂಕೊ ಮುಳಕ್ಕಲ್ 13 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿ ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದ ಫ್ರಾಂಕೊ ಕಳೆದ ವಾರ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಅವರು ಬಿಡುಗಡೆಗೊಂಡಾಗ ಅವರ ಬೆಂಬಲಿಗರು ಹೂಗುಚ್ಛದೊಂದಿಗೆ ಸ್ವಾಗತಿಸಿದ್ದರು. ಫಾದರ್ ಕುರಿಯಕೋಸ್ ಸಾಕ್ಷಿ. ಆದರೆ, ಪ್ರಕರಣದಲ್ಲಿ ಅವರಿಗೆ ಪ್ರಮುಖ ಪಾತ್ರವಿಲ್ಲ. ಬಿಷಪ್ ಫ್ರಾಂಕೋ ವಿರುದ್ಧದ ಆರೋಪದ ಬಗ್ಗೆ ಅರಿವಿರುವ ಐದಾರು ಮಂದಿ ಪಾದ್ರಿಗಳಲ್ಲಿ ಹಾಗೂ ನಾವು ವಿಚಾರಣೆ ನಡೆಸಿದ ಪಾದ್ರಿಗಳಲ್ಲಿ ಅವರೂ ಒಬ್ಬರು ಎಂದು ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ ಡಿವೈಎಸ್‌ಪಿ ಸುಭಾಶ್ ತಿಳಿಸಿದ್ದಾರೆ.

ಫಾದರ್ ಕುರಿಯಕೋಸ್ ಅವರಿಗೆ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದ ಸಮಸ್ಯೆ ಇತ್ತು. ಆದರೆ, ತೀವ್ರ ಆರೋಗ್ಯ ಸಮಸ್ಯೆ ಇರಲಿಲ್ಲ. ಮೂರು ದಿನಗಳ ಹಿಂದೆ ಅವರು ನನ್ನೊಂದಿಗೆ ಮಾತನಾಡಿದ್ದರು. ಬಿಷಪ್‌ನ ಸಹವರ್ತಿಗಳಿಂದ ಗೂಂಡಾಗಿರಿ ಹಾಗೂ ಬೆದರಿಕೆಯನ್ನು ತಾನು ಎದುರಿಸುತ್ತಿರುವುದಾಗಿ ಅವರು ತಿಳಿಸಿದ್ದರು. ಅವರಿಗೆ ಜೀವ ಭಯ ಇತ್ತು ಎಂದು ಜೋಸ್ ಕುರಿಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News