ತೆಂಡುಲ್ಕರ್-ವಾರ್ನರ್ ಜಂಟಿ ದಾಖಲೆ ಮುರಿದ ರೋಹಿತ್ ಶರ್ಮಾ

Update: 2018-10-22 13:20 GMT

ಗುವಾಹತಿ, ಅ.22: ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮಾ ರವಿವಾರ ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ಆಸ್ಟ್ರೇಲಿಯದ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಅವರ ಜಂಟಿ ದಾಖಲೆಯನ್ನು ಮುರಿದರು. ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರು ಬಾರಿ 150ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾದರು.

ತನ್ನ ಭರ್ಜರಿ ಬ್ಯಾಟಿಂಗ್‌ನ ಮೂಲಕ ‘ಹಿಟ್‌ಮ್ಯಾನ್’ಎಂದೇ ಖ್ಯಾತಿ ಪಡೆದಿರುವ ರೋಹಿತ್ ವಿಂಡೀಸ್ ವಿರುದ್ಧ ಗುವಾಹತಿಯಲ್ಲಿ ರವಿವಾರ ನಡೆದ ಮೊದಲ ಏಕದಿನದಲ್ಲಿ 20ನೇ ಶತಕ ಸಿಡಿಸಿದರು.

 ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ ಆರನೇ ಬಾರಿ 150ಕ್ಕೂ ಅಧಿಕ ರನ್ ಗಳಿಸಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಬಾರಿ 150 ಪ್ಲಸ್ ಸ್ಕೋರ್ ಗಳಿಸಿದ ಸಾಧನೆ ಮಾಡಿದರು.

ಭಾರತದ ಬ್ಯಾಟಿಂಗ್ ದಂತಕತೆ ತೆಂಡುಲ್ಕರ್ ಹಾಗೂ ಆಸೀಸ್‌ನ ವಾರ್ನರ್ ಐದು ಬಾರಿ 150 ಪ್ಲಸ್ ಸ್ಕೋರ್ ಗಳಿಸಿದ್ದಾರೆ.

 ವೆಸ್ಟ್‌ಇಂಡೀಸ್‌ನ ಸ್ಫೋಟಕ ದಾಂಡಿಗ ಕ್ರಿಸ್ ಗೇಲ್, ಶ್ರೀಲಂಕಾದ ಸನತ್ ಜಯಸೂರ್ಯ ಹಾಗೂ ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ ನಾಲ್ಕು ಬಾರಿ 150 ಪ್ಲಸ್ ಸ್ಕೋರ್ ಗಳಿಸಿದ್ದಾರೆ. ಈ ನಾಲ್ವರು ಬ್ಯಾಟ್ಸ್‌ಮನ್‌ಗಳು ಓಪನರ್ ಆಗಿರುವುದು ವಿಶೇಷ.

ರೋಹಿತ್ ಶರ್ಮಾ ವಿಂಡೀಸ್ ವಿರುದ್ಧ ಭಾರತ ಗೆಲ್ಲಲು 323 ರನ್ ಚೇಸಿಂಗ್ ಮಾಡುತ್ತಿದ್ದ ವೇಳೆ 117 ಎಸೆತಗಳಲ್ಲಿ ಔಟಾಗದೆ 152 ರನ್ ಗಳಿಸಿದ್ದರು. 51 ಎಸೆತಗಳಲ್ಲಿ ಅರ್ಧಶತಕ, 88 ಎಸೆತಗಳಲ್ಲಿ ಶತಕ, ಮುಂದಿನ 29 ಎಸೆತಗಳಲ್ಲಿ 150 ರನ್ ಪೂರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News