ಮಂಡ್ಯ, ಜಮಖಂಡಿ, ರಾಮನಗರ ಕ್ಷೇತ್ರಗಳಲ್ಲಿ ಯುದ್ಧಕ್ಕೂ ಮೊದಲೇ ಬಿಜೆಪಿ ಶಸ್ತ್ರ ಕೆಳಗಿಟ್ಟಿತೇ ?

Update: 2018-10-22 13:01 GMT

ಬೆಂಗಳೂರು, ಅ. 22: ಆಡಳಿತರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಹಾಗೂ ವಿಪಕ್ಷ ಬಿಜೆಪಿ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮೊದಲೇ ಬಿಜೆಪಿ ಶಸ್ತ್ರ ಕೆಳಗಿಟ್ಟಿತೇ ಎಂಬ ಸಂಶಯ ಸೃಷ್ಟಿಸಿದೆ.

ಮುಂದಿನ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ನ.3ಕ್ಕೆ ನಡೆಯಲಿರುವ ಉಪ ಚುನಾವಣೆ ದಿಕ್ಸೂಚಿ ಎಂದು ವಿಶ್ಲೇಷಿಸಲಾಗುತ್ತದೆ. ಆದರೆ, ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವಿಗೆ ಪೈಪೋಟಿ ನಡೆಸಬೇಕಿದ್ದ ಬಿಜೆಪಿ, ತನ್ನ ಕ್ಷೇತ್ರಗಳನ್ನಷ್ಟೇ ಉಳಿಸಿಕೊಳ್ಳಲು ಹೋರಾಟ ನಡೆಸಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಆರಂಭದಲ್ಲಿಯೇ ಉಪ ಚುನಾವಣಾ ಅಭ್ಯರ್ಥಿಗಳನ್ನು ಪ್ರಕಟಿಸುವ ಮೂಲಕ ಕಾಂಗ್ರೆಸ್-ಜೆಡಿಎಸ್ ವಿರುದ್ಧ ತೊಡೆತಟ್ಟಿದ್ದ ಬಿಜೆಪಿ, ಇದೀಗ ಶಿವಮೊಗ್ಗ-ಬಳ್ಳಾರಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಎರಡು ವಿಧಾನಸಭೆ ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ‘ನಾಮಕಾವಸ್ತೆ’ಗೆ ಸ್ಪರ್ಧಿಸಿದೆಯೇ ಎಂಬ ಅನುಮಾನ ಸೃಷ್ಟಿಸಿದೆ.

ಪುತ್ರ ರಾಘವೇಂದ್ರ ಅವರನ್ನು ಕಣಕ್ಕಿಳಿಸಿರುವ ಬಿಎಸ್‌ವೈ ಶಿವಮೊಗ್ಗ ಕ್ಷೇತ್ರ ಉಳಿಸಿಕೊಳ್ಳಲು ಆದ್ಯತೆ ನೀಡಿದ್ದರೆ, ಅತ್ತ ಬಳ್ಳಾರಿ ಕ್ಷೇತ್ರದಲ್ಲಿ ಸಹೋದರಿ ಜೆ.ಶಾಂತಾ ಅವರನ್ನು ಗೆಲ್ಲಿಸಲು ಶಾಸಕ ಶ್ರೀರಾಮುಲು ಪ್ರಚಾರದ ಅಖಾಡಕ್ಕಿಳಿದಿದ್ದು, ಮೈತ್ರಿ ಅಭ್ಯರ್ಥಿಗಳ ವಿರುದ್ಧ ನೇರ ಹಣಾಹಣಿಗೆ ಸಜ್ಜಾಗಿದ್ದಾರೆ. ಆದರೆ, ಮಂಡ್ಯ ಲೋಕಸಭೆ, ಜಮಖಂಡಿ, ರಾಮನಗರ ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಹೇಳಿಕೆಗಳನ್ನು ನೀಡುತ್ತಿದ್ದ ಬಿಜೆಪಿ ಮುಖಂಡರು, ಇದೀಗ ಬಿರುಸಿನ ಪ್ರಚಾರದಿಂದ ಹಿಂದೆ ಸರಿದಿದ್ದಾರೆಯೇ ಎಂಬ ಸಂಶಯ ಬಿಜೆಪಿ ವಲಯದಿಂದಲೇ ಕೇಳಿಬಂದಿದೆ.

ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಕೊನೆಯ ಕ್ಷಣದಲ್ಲಿ ‘ಆಪರೇಷನ್ ಕಮಲ’ ಮೂಲಕ ಕರೆತಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕೈತೊಳೆದುಕೊಂಡಿರುವ ಬಿಜೆಪಿ, ಎರಡೂ ಕ್ಷೇತ್ರಗಳಲ್ಲಿಯೂ ಕೇವಲ ಮಾಧ್ಯಮ ಹೇಳಿಕೆಗಳಷ್ಟೇ ಸೀಮಿತವಾಗಿದ್ದಾರೆಂಬ ಆರೋಪ ವ್ಯಕ್ತವಾಗಿದೆ.

ಇನ್ನು ಜಮಖಂಡಿ ಕ್ಷೇತ್ರದಲ್ಲಿಯೂ ಅಲ್ಪಮತದ ಅಂತರದಿಂದ ಕಳೆದ ಚುನಾವಣೆಯಲ್ಲಿ ಸೋಲನ್ನಪ್ಪಿದ ಶ್ರೀಕಾಂತ್ ಕುಲಕರ್ಣಿ ಅವರನ್ನು ಕಣಕ್ಕಿಳಿಸಿದ್ದು, ಬಿಜೆಪಿ ಚುನಾವಣಾ ಉಸ್ತುವಾರಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಚಾರದ ವೇಳೆ ವಿದೇಶ ಪ್ರವಾಸ ಕೈಗೊಂಡಿದ್ದು, ಅ.29ಕ್ಕೆ ಮರಳಲಿದ್ದಾರೆಂದು ಹೇಳಲಾಗುತ್ತಿದೆ. ನ.3ಕ್ಕೆ ಮತದಾನ ನಡೆಯಲಿದ್ದು, ಪ್ರಚಾರಕ್ಕೆ ಕೇವಲ ಮೂರು ದಿನವಷ್ಟೇ ಇರಲಿದೆ.

ಹೀಗಾಗಿ ಶಿವಮೊಗ್ಗ ಮತ್ತು ಬಳ್ಳಾರಿ ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಿಜೆಪಿ ಮುಖಂಡರು, ಮೈತ್ರಿ ಸರಕಾರಕ್ಕೆ ಕನಿಷ್ಠ ಪೈಪೋಟಿ ನೀಡುವ ಆಸೆಯನ್ನು ಕೈಬಿಟ್ಟಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ವಲಯದಲ್ಲೇ ಉಪ ಚುನಾವಣಾ ಯುದ್ಧಕ್ಕೂ ಮೊದಲೇ ವಿಪಕ್ಷ ಶಸ್ತ್ರ ತ್ಯಜಿಸಿತೇ ಎಂಬ ಮಾತು ಕೇಳಿಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News