ಚಿತ್ರದುರ್ಗ: ಎಚ್1ಎನ್1 ಗೆ ಮೂವರು ಬಲಿ

Update: 2018-10-22 17:09 GMT

ಚಿತ್ರದುರ್ಗ, ಅ.22: ರಾಜ್ಯದಲ್ಲಿ ಎಚ್1ಎನ್1 ರೋಗ ಪ್ರಕರಣಗಳು ಕಳೆದ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ವರದಿಯಾಗಿವೆ. ಜಿಲ್ಲೆಯಲ್ಲಿ ಈ ವರ್ಷ 13 ಎಚ್1ಎನ್1 ರೋಗ ಪ್ರಕರಣಗಳು ದೃಢಪಟ್ಟಿದ್ದು, ಈ ಮಾರಕ ಸೋಂಕಿಗೆ ಒಟ್ಟು ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಎಚ್1ಎನ್1 ರೋಗ ನಿಯಂತ್ರಣ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶ್ವಾಸಕೋಶದ ಸೋಂಕು ಕಾಣಿಸಿಕೊಂಡು, ನೆಗಡಿ, ಕೆಮ್ಮು, ಜ್ವರದ ಜೊತೆಗೆ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳ ಬಗ್ಗೆ ತೀವ್ರ ನಿಗಾವಹಿಸುವ ಜೊತೆಗೆ ಎಚ್1ಎನ್1 ರೋಗವಿದ್ದಲ್ಲಿ, ತ್ವರಿತವಾಗಿ ರೋಗ ಪತ್ತೆ ಮಾಡಬೇಕೆಂದು ಅವರು ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಲಾ ಮಕ್ಕಳ ಮೂಲಕ ಕರಪತ್ರ: ಎಚ್1ಎನ್1 ರೋಗ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆ ಸುಮಾರು 2 ಲಕ್ಷ ಕರಪತ್ರಗಳನ್ನು ಸಿದ್ಧಪಡಿಸಿ, ಎಲ್ಲ ಶಾಲಾ ಮಕ್ಕಳ ಮೂಲಕ ಅವರ ಮನೆಗೆ ತಲುಪಿಸುವ ಕೆಲಸ ಆಗಬೇಕು. ಎಲ್ಲ ಮನೆಗಳಿಗೆ ಕರಪತ್ರ ತಲುಪಿದಲ್ಲಿ ರೋಗದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿದಂತಾಗುತ್ತದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಕರಪತ್ರ ವಿತರಣೆಗೆ ಕ್ರಮ ವಹಿಸಬೇಕು ಎಂದು ಡಿಡಿಪಿಐ ಅವರಿಗೆ ಸೂಚನೆ ನೀಡಿದರು.

ಔಷಧದ ಕೊರತೆಯಾಗಬಾರದು: ಯಾವುದೇ ಆಸ್ಪತ್ರೆಗಳಲ್ಲಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡು, ನೆಗಡಿ, ಕೆಮ್ಮು, ಜ್ವರದ ಜೊತೆಗೆ ಉಸಿರಾಟದ ತೊಂದರೆಗಾಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳಿಗೆ ತೀವ್ರ ಆರೋಗ್ಯ ತಪಾಸಣೆ ನಡೆಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆಸ್ಪತ್ರೆಗಳಲ್ಲಿ ಈ ರೋಗಿಗಳಿಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಎಚ್1ಎನ್1 ರೋಗಿಗಳಿಗೆ ನೀಡಲು ಟ್ಯಾಮಿಫ್ಲೂ ಮಾತ್ರೆಗಳನ್ನು ಎಲ್ಲ ಆಸ್ಪತ್ರೆಗಳಲ್ಲಿ ಸಾಕಷ್ಟು ದಾಸ್ತಾನು ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಔಷಧದ ಕೊರತೆಯಾಗಬಾರದು. ಎಚ್1ಎನ್1 ರೋಗ ಬಾರದಂತೆ ತಡೆಯಲು ಲಸಿಕೆ ಲಭ್ಯವಿದ್ದು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ವೃದ್ಧರು ಹಾಗೂ ಗರ್ಭಿಣಿಯರಿಗೆ ಲಸಿಕೆ ನೀಡುವ ಕುರಿತು ರಾಜ್ಯ ಮಟ್ಟದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಈ ಕುರಿತು ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆದೇಶೀಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರೇಣುಪ್ರಸಾದ್ ಮಾತನಾಡಿ, ರೋಗ ಪತ್ತೆ ಹಾಗೂ ನಿರ್ವಹಣೆಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತ್ವರಿತ ಕಾರ್ಯಾಚರಣೆ ತಂಡ ರಚಿಸಲಾಗಿದ್ದು, ರೋಗ ನಿರೋಧಕ ಶಕ್ತಿ ತೀವ್ರ ಕಡಿಮೆ ಇದ್ದ ಕಾರಣದಿಂದ ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಆಸ್ಪತ್ರೆಗಳಲ್ಲಿ ರೋಗ ತಪಾಸಣೆ ಹಾಗೂ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆಗೆ ಬೇಕಾಗುವ ಔಷಧಿ ಮತ್ತು ಇತರೆ ಪರಿಕರಗಳನ್ನು ಒದಗಿಸಲಾಗಿದೆ. ತುರ್ತಾಗಿ ರೋಗಿಗಳನ್ನು ಸಾಗಿಸಲು 108 ಆಂಬುಲೆನ್ಸ್ ವ್ಯವಸ್ಥೆ ಇದೆ. ರೋಗ ಪ್ರಕರಣ ವರದಿಯಾದ ತಕ್ಷಣ ಆರೋಗ್ಯ ಮತ್ತು ಆಶಾ ಕಾರ್ಯಕರ್ತರನ್ನು ರೋಗಿಯ ಮನೆ ಸೇರಿದಂತೆ ಸುತ್ತಮುತ್ತಲಿನ ಸುಮಾರು 100 ಮನೆಗಳ ಸಮೀಕ್ಷೆ ನಡೆಸಿ, ಆರೋಗ್ಯ ಶಿಕ್ಷಣ ನೀಡಲು ಕ್ರಮ ವಹಿಸಲಾಗಿದೆ. ಸಂಶಯಾಸ್ಪದ ಪ್ರಕರಣವಿದ್ದಲ್ಲಿ, ಗಂಟಲು ಸ್ರಾವ ಮಾದರಿ ಪರೀಕ್ಷೆಗೆ ಕಳುಹಿಸಿ, ಮಾರ್ಗಸೂಚಿಯಂತೆ ಟ್ಯಾಮಿಫ್ಲೂ ಮಾತ್ರೆ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ವಿ. ನೀರಜ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಯಪ್ರಕಾಶ್, ಡಿಡಿಪಿಐ ಅಂಥೋಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಆರ್.ಸಿ.ಹೆಚ್. ಅಧಿಕಾರಿ ಡಾ. ಸುರೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಸದ್ಯ ಎಚ್1ಎನ್1 ರೋಗ ಪತ್ತೆಗೆ ಬೆಂಗಳೂರು ಅಥವಾ ಮಣಿಪಾಲದ ಪ್ರಯೋಗಾಲಯವನ್ನು ಅವಲಂಬಿಸಬೇಕಿದ್ದು, ಜಿಲ್ಲೆಯಲ್ಲಿಯೇ ಇಂತಹ ವ್ಯವಸ್ಥೆ ಮಾಡಲು ಸಾಧ್ಯವೇ ಎನ್ನುವ ಕುರಿತು ಪರಿಶೀಲಿಸಿ, ವರದಿ ನೀಡಿದಲ್ಲಿ ಅಗತ್ಯ ಅನುದಾನ ದೊರಕಿಸಲು ಯತ್ನಿಸಲಾಗುವುದು. ಇದರಿಂದ ಜಿಲ್ಲೆಯಲ್ಲಿ ಕ್ಲಿಷ್ಟ ರೋಗಗಳ ತ್ವರಿತ ತಪಾಸಣೆಗೆ ಶಾಶ್ವತ ವ್ಯವಸ್ಥೆ ದೊರಕಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

ಜಿಲ್ಲೆಯಲ್ಲಿ ಎಚ್1ಎನ್1 ನಿಂದ ಒಟ್ಟು ಮೂವರು ಮೃತಪಟ್ಟಿದ್ದು, ರೋಗ ನಿರೋಧಕ ಅಂಶದ ಕೊರತೆಯಿಂದ ಸಾವು ಸಂಭವಿಸಿದೆ. ರೋಗದ ಕುರಿತು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಈ ರೋಗವನ್ನು ನಿರ್ದಿಷ್ಟ ಚಿಕಿತ್ಸೆ ಮೂಲಕ ಗುಣಪಡಿಸಲು ಸಾಧ್ಯವಿದೆ. ವೈದ್ಯರು, ತ್ವರಿತವಾಗಿ ರೋಗ ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ದೊರಕಿಸಿದಲ್ಲಿ, ರೋಗಿಯ ಮರಣವನ್ನು ತಪ್ಪಿಸಬಹುದು.
-ಆರ್. ಗಿರೀಶ್, ಜಿಲ್ಲಾಧಿಕಾರಿ

ತಾಲೂಕುವಾರು ಎಚ್1ಎನ್1 ದೃಢಪಟ್ಟ ಪ್ರಕರಣಗಳ ವಿವರ
ಚಿತ್ರದುರ್ಗ 05, ಚಳ್ಳಕೆರೆ 02, ಹಿರಿಯೂರು01, ಹೊಳಲ್ಕೆರೆ 04, ಮೊಳಕಾಲ್ಮೂರು 01


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News