“ಪ್ರಿಯಾಂಕಾ ಗಾಂಧಿ ಇಮೋಶನಲ್ ಬ್ಲಾಕ್‌ಮೇಲರ್”

Update: 2018-10-22 17:11 GMT

ರಾಯ್ ಬರೇಲಿ,ಅ.22: ಪ್ರಿಯಾಂಕಾ ಗಾಂಧಿ ಓರ್ವ ಇಮೋಶನಲ್ ಬ್ಲಾಕ್‌ಮೇಲರ್ ಎಂದು ಬರೆಯಲಾಗಿರುವ ನೂರಾರು ಭಿತ್ತಿಪತ್ರಗಳು ಆಕೆಯ ತಾಯಿ, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ರಾಯ್‌ಬರೇಲಿಯಲ್ಲಿ ಸೋಮವಾರ ಪತ್ತೆಯಾಗಿವೆ.

ಉತ್ತರ ಪ್ರದೇಶದ ಹಲವೆಡೆಗಳಲ್ಲಿ ರಾತ್ರಿ ಬೆಳಗಾಗುವುದರೊಳಗೆ ರಾರಾಜಿಸುತ್ತಿದ್ದ ಪೋಸ್ಟರ್‌ಗಳಲ್ಲಿ ಪ್ರಿಯಾಂಕಾ ಗಾಂಧಿಯನ್ನು ನಾಪತ್ತೆಯಾಗಿದ್ದಾರೆ ಎಂದು ತಿಳಿಸಲಾಗಿದೆ. ರಾಯ್ ಬರೇಲಿ ಲೋಕಸಭಾ ಕ್ಷೇತ್ರದ ಭವಿಷ್ಯದ ನಾಯಕಿ ಎಂದೇ ಬಿಂಬಿಸಲಾಗುತ್ತಿರುವ ಪ್ರಿಯಾಂಕಾ ಕಳೆದ ಬಾರಿ ರಾಯ್ ಬರೇಲಿಗೆ ಬಂದು ಹೋದ ನಂತರ ಕ್ಷೇತ್ರದಲ್ಲಿ ಅನೇಕ ದುರ್ಘಟನೆಗಳು ನಡೆದರೂ ಅಲ್ಲಿನ ಜನರನ್ನು ಭೇಟಿಯಾಗಿ ವಿಚಾರಿಸುವ ಗೋಜಿಗೆ ಆಕೆ ಹೋಗಿಲ್ಲ ಎಂದು ಪೋಸ್ಟರ್‌ನಲ್ಲಿ ಆರೋಪಿಸಲಾಗಿದೆ.

ಚುನಾವಣೆ ಸಮಯದಲ್ಲಿ ಅಂತಿಮ ಘಳಿಗೆಯಲ್ಲಿ ರಾಯ್ ಬರೇಲಿಗೆ ಆಗಮಿಸಿ, ಈ ಕ್ಷೇತ್ರದ ಜೊತೆ ಗಾಂಧಿ ಪರಿವಾರಕ್ಕೆ ಇರುವ ನಂಟಿನ ಬಗ್ಗೆ ಮಾತನಾಡಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಲು ಪ್ರಿಯಾಂಕಾ ಪ್ರಯತ್ನಿಸುತ್ತಾರೆ ಎಂದು ಆಪಾದಿಸಿರುವ ಭಿತ್ತಿಪತ್ರದಲ್ಲಿ ಆಕೆಯನ್ನು “ಇಮೋಶನಲ್ ಬ್ಲಾಕ್‌ಮೇಲರ್” ಎಂದು ವ್ಯಾಖ್ಯಾನಿಸಲಾಗಿದೆ.

ರಾಯ್ ಬರೇಲಿಯ ತ್ರಿಪುಲಾ ಸ್ಕ್ವೇರ್ ಮತ್ತು ಹರ್ದಾಸ್‌ಪುರ ಸೇರಿದಂತೆ ಹಲವು ಸಾರ್ವಜನಿಕ ಪ್ರದೇಶಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಈ ರೀತಿಯ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ರಾಜ್ಯದಲ್ಲಿ ನಡೆದ ಭೀಕರ ರೈಲು ಅಪಘಾತಗಳು ಮತ್ತು ಉಂಚಹರ್‌ನಲ್ಲಿ ನಡೆದ ಎನ್‌ಟಿಪಿಸಿ ಸ್ಫೋಟ ಘಟನೆಯ ಸಂದರ್ಭದಲ್ಲೂ ಆಕೆ ಗೈರಾಗಿರುವುದನ್ನು ಪೋಸ್ಟರ್‌ನಲ್ಲಿ ಪ್ರಶ್ನಿಸಲಾಗಿದೆ. ಹಿಂದೂ ಹಬ್ಬಗಳಾದ ನವರಾತ್ರಿ,ದುರ್ಗಾ ಪೂಜೆ ಮತ್ತು ದಸರಾ ಸಮಯದಲ್ಲಿ ಆಕೆ ಗೈರಾಗಿರುವ ಕಾರಣ ಮುಂದಿನ ಈದ್ ಹಬ್ಬಕ್ಕಾದರೂ ತಾಯಿಯ ಸ್ವಕ್ಷೇತ್ರಕ್ಕೆ ಆಗಮಿಸುತ್ತೀರಾ ಎಂದು ಪ್ರಿಯಾಂಕಾರನ್ನು ಪ್ರಶ್ನಿಸಲಾಗಿದೆ. ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಮರಳುವುದು ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳುವ ಸೂಚನೆಯಿರುವ ಕಾರಣ ತಬ್ಬಿಬ್ಬುಗೊಂಡಿರುವ ವಿರೋಧಿಗಳು ಈ ರೀತಿಯ ಕೊಳಕು ತಂತ್ರಗಳನ್ನು ಹೂಡುತ್ತಿದ್ದಾರೆ ಎಂದು ಕಾಂಗ್ರೆಸ್ ಪೋಸ್ಟರ್ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News