ಹುಯೆನ್ ತ್ಸಾಂಗನ ಹೆಜ್ಜೆ ಗುರುತು ಅರಸುತ್ತಾ....

Update: 2018-10-22 18:34 GMT

ಚರಿತ್ರೆಯನ್ನು ದಾಖಲಿಸುವ ಪರಿಕಲ್ಪನೆಯೇ ಭಾರತೀಯರಿಗಿರಲಿಲ್ಲ. ವಿದೇಶಿಯರ ಆಗಮನದ ಬಳಿಕ ಅಂತಹದೊಂದು ಪರಂಪರೆ ಆರಂಭವಾಯಿತು. ಈ ದೇಶದ ಇತಿಹಾಸ ಪುರಾಣ, ಕಾವ್ಯಗಳ ರೂಪಕಗಳಲ್ಲಿ ಅಡಗಿದೆ. ಆ ಒಗಟುಗಳನ್ನು ಒಡೆಯುತ್ತಾ ಇತಿಹಾಸ ಮತ್ತು ಪುರಾಣಗಳನ್ನು ಬೇರ್ಪಡಿಸುವ ಪ್ರಯತ್ನ ಶತಮಾನಗಳಿಂದ ನಡೆಯುತ್ತಾ ಬಂದಿದೆ. ಮುಸ್ಲಿಮ್ ಅರಸರ ಆಸ್ಥಾನದ ಖ್ಯಾತ ಬರಹಗಾರರು ಆ ಕಾಲದ ಸ್ಥಿತಿಗತಿಗಳನ್ನು ರಾಜನ ಮೂಗಿನ ನೇರಕ್ಕೆ ತಕ್ಕಂತೆ ಬರೆಯುತ್ತಿದ್ದರು. ಆದರೆ ಅದು ಶೇ. 100ರಷ್ಟು ಪೂರ್ಣ ಇತಿಹಾಸ ಎಂದು ನಂಬುವಂತಿರಲಿಲ್ಲ. ಆ ಬಳಿಕ ಬ್ರಿಟಿಷರು ತಮ್ಮ ರಾಜಕೀಯ ಹಿತಾಸಕ್ತಿಗೆ ಪೂರಕವಾಗುವಂತೆ ಇತಿಹಾಸವನ್ನು ಪುನರ್ ರಚಿಸಿದರು. ಇದೇ ಸಂದರ್ಭದಲ್ಲಿ ಭಾರತವನ್ನು ಹಾದು ಹೋದ ಹಲವು ಪ್ರಮುಖ ಪ್ರವಾಸಿಗರೂ ತಾವು ಕಂಡ ಅಂದಿನ ಸಾಮಾಜಿಕ ಸ್ಥಿತಿಗತಿಗಳನ್ನು ದಾಖಲಿಸಿದ್ದಾರೆ. ಇಂತಹ ಪ್ರವಾಸಿಗರಿಂದ ಭಾರತದ ಆ ಕಾಲಘಟ್ಟದ ಹಲವು ಸಾಮಾಜಿಕ, ರಾಜಕೀಯ ಬೆಳವಣಿಗೆಗಳನ್ನು ತಿಳಿಯಲು ಸಾಧ್ಯವಾಗಿದೆ. ಚೀನಾ, ಅರೇಬಿಯಾ, ಇರಾನ್ ಸೇರಿದಂತೆ ಹಲವು ಪ್ರವಾಸಿಗರ ಕಥನಗಳು ದಾಖಲಿಸಲ್ಪಟ್ಟಿವೆ. ಕನ್ನಡದಲ್ಲೂ ಇದು ಅನುವಾದಗೊಂಡಿದೆ. ಎಚ್. ಎಲ್. ನಾಗೇಗೌಡ ಸಂಪಾದಿಸಿದ ‘ಪ್ರವಾಸಿ ಕಂಡ ಇಂಡಿಯಾ’ ಸಂಪುಟಗಳು ಈ ನಿಟ್ಟಿನಲ್ಲಿ ಅತ್ಯಂತ ಮಹತ್ವವಾದುದು.
 ಭಾರತ ಕಂಡ ಪ್ರವಾಸಿಗರಲ್ಲಿ ಹುಯೆನ್ ತ್ಸಾಂಗ್ ಪ್ರಮುಖ. ಬೌದ್ಧ ಸನ್ಯಾಸಿಯಾಗಿರುವ ಈತನ ಪ್ರವಾಸ ಅಧ್ಯಾತ್ಮ ಕೇಂದ್ರವಾಗಿದ್ದರೂ, ಅದು ಭಾರತದ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಯ ಕಡೆಗೆ ತನ್ನ ಬೆಳಕನ್ನು ಚೆಲ್ಲುತ್ತದೆ. ಇದೀಗ ಮೊದಲ ಬಾರಿ ಎಂಬಂತೆ ಹುಯೆನ್ ತ್ಸಾಂಗ್‌ನ ‘ಮಹಾ ಪಯಣ’ವನ್ನು ಲೇಖಕರಾದ ರವಿ ಹಂಜ್ ಅವರು ಕನ್ನಡಕ್ಕೆ ತಂದಿದ್ದಾರೆ. ಹುಯೆನ್ ತ್ಸಾಂಗನ ಬಗ್ಗೆ ಅನೇಕ ಸಂಶೋಧಕರು ಸಂಶೋಧನೆಯನ್ನು ಮಾಡಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಹುಯೆನ್ ತ್ಸಾಂಗನ ಸಮಕಾಲೀನವಾದ ಹುಯಿಲಿಯಿಂದ ಹಿಡಿದು ರಿಚರ್ಡ್ ಹರ್ಟ್ಸ್, ವಿಷಿಸಾರನ್, ಸ್ಯಾಲಿಹಾವಿ ರಿಗ್ಗಿನ್ಸ್ ಅಲ್ಲದೇ ಇನ್ನೂ ಅನೇಕರಿದ್ದಾರೆ. ಆ ಎಲ್ಲ ಸಂಶೋಧಕರ ಪುಸ್ತಕಗಳನ್ನು ಓದಿ ಅವುಗಳ ಸತ್ಯಾಸತ್ಯತೆಗಳನ್ನು ಶೋಧಿಸಿ ಲೇಖಕರು ಈ ಕೃತಿಯನ್ನು ಬರೆದಿದ್ದಾರೆ. ಈ ಕೃತಿಗೆ ಕಥನ ಗುಣವಿದೆ. ಒಂದು ರೀತಿಯಲ್ಲಿ ಹುಯೆನ್ ತ್ಸಾಂಗ್‌ನನ್ನು ಬರೇ ಪ್ರವಾಸಿಗನಂತೆ ಕಾಣದೆ, ಸಾಹಸಿಗನಂತೆ ಗುರುತಿಸಲಾಗಿದೆ. ಭಾರತದ ಅಂದಿನ ಒಗಟುಗಳನ್ನು ಮುರಿಯುತ್ತಾ ಸಾಗುವ ಸಾಹಸ ವೀರನಾಗಿ ಇಲ್ಲಿ ಹುಯೆನ್ ತ್ಸಾಂಗ್ ಭಾಸವಾಗುತ್ತಾನೆ.
ಕೃತಿಯ ಆರಂಭದಲ್ಲಿ ಹುಯೆನ್ ತ್ಸಾಂಗ್‌ನ ಹಿನ್ನೆಲೆಯನ್ನು ವಿವರಿಸುತ್ತಾರೆ. ಇದಾದ ಬಳಿಕ ಆತ ಭಾರತಕ್ಕೆ ಕಾಲಿಡುವ ಪೂರ್ವದ ಪ್ರವಾಸ ವಿವರಗಳೂ ಕಥನ ರೂಪದಲ್ಲಿ ಕಟ್ಟಿಕೊಡಲ್ಪಟ್ಟಿದೆ. ಬುದ್ಧನನ್ನು ಹುಡುಕುತ್ತಾ, ದರೋಡೆಕೋರರನ್ನು ಎದುರಾದ ಘಟನೆಗಳಿವೆ. ರಂಗುರಂಗಿನ ವಾರಣಾಸಿ, ಸ್ತಬ್ಧ ಸಾರಾನಾಥ್, ಗಯಾದ ಬೋಧಿ ವೃಕ್ಷದ ನೆರಳು, ಪುಲಿಕೇಶಿಯ ನಾಡಿನಲ್ಲಿ, ಹಲವು ಅರಸರ ಜೊತೆಗಿನ ಮುಖಾಮುಖಿ ಇವೆಲ್ಲವೂ ನಮ್ಮನ್ನು ಕುತೂಹಲದಿಂದ ಓದಿಸುತ್ತವೆ. ಹುಯೆನ್ ತ್ಸಾಂಗ್ ಪ್ರವಾಸದ ಪರ್ಯಾವಸಾನ ಕೂಡ ಅಷ್ಟೇ ಕುತೂಹಲಕರ ಮತ್ತು ನಿಗೂಢವಾಗಿದೆ. ಈ ಪ್ರವಾಸ ಅವನೊಂದಿಗೆ ಮುಗಿಯದೇ, ನಮ್ಮಾಂದಿಗೆ ಮುಂದುವರಿಯುತ್ತದೆ.
ಸಮಾಜ ಮುಖಿ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 160. ಮುಖಬೆಲೆ 120. ಆಸಕ್ತರು 080-22277868 ದೂರವಾಣಿಯನ್ನು ಸಂಪರ್ಕಿಸಬಹುದು.

 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News