ಚೋಕ್ಸಿಯಿಂದ ಜೇಟ್ಲಿ ಪುತ್ರಿಗೆ ಹಣ ಸಂದಾಯವಾಗಿದೆ ಎಂದ ಕಾಂಗ್ರೆಸ್: ಹಣ ವಾಪಸ್ ನೀಡಲಾಗಿದೆ ಎಂದ ಬಿಜೆಪಿ!

Update: 2018-10-23 07:45 GMT

ಹೊಸದಿಲ್ಲಿ, ಅ.23: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಮಗಳು ಮತ್ತು ಅಳಿಯ, ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿಯವರಿಂದ 24 ಲಕ್ಷ ರೂಪಾಯಿ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಜೇಟ್ಲಿಯವರನ್ನು ತಕ್ಷಣ ಕೇಂದ್ರ ಸಂಪುಟದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

ಇದು ಕೇಂದ್ರ ಸಚಿವರ ಮೌನಸಮ್ಮತಿ ಮತ್ತು ಹಿತಾಸಕ್ತಿಗಳ ಸಂಘರ್ಷಕ್ಕೆ ಸ್ಪಷ್ಟ ನಿದರ್ಶನವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ.

ಜೇಟ್ಲಿಯವರ ಪುತ್ರಿ ಸೋನಾಲಿ ಮತ್ತು ಆಕೆಯ ಪತಿ ಜೈಯೇಶ್ ಬಕ್ಷಿ ಅವರ ಮಾಲಕತ್ವದ ಜೇಟ್ಲಿ ಆ್ಯಂಡ್ ಅಸೋಸಿಯೇಟ್ಸ್ ಚೋಕ್ಸಿಯವರ ಗೀತಾಂಜಲಿ ಜೆಮ್ಸ್‍ನಿಂದ 2017ರ ಡಿಸೆಂಬರ್‍ನಲ್ಲಿ 24 ಲಕ್ಷ ರೂಪಾಯಿ ಹಣ ಪಡೆದಿದೆ ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಸಚಿನ್ ಪೈಲಟ್, ಸುಷ್ಮಿತಾ ದೇವ್ ಮತ್ತು ರಾಜೀವ್ ಸತವ್ ಹೇಳಿದ್ದಾರೆ.

ಸುದ್ದಿ ಜಾಲತಾಣವಾದ ‘ದ ವೈರ್’ ಈ ಬಗ್ಗೆ ಕೇಳಿದ ಪ್ರಶ್ನೆಗೆ, ಗೀತಾಂಜಲಿ ಜೆಮ್ಸ್ ಲಿಮಿಟೆಡ್ ಸಂಸ್ಥೆಯನ್ನು ಪ್ರತಿನಿಧಿಸಲು ಅಥವಾ ಅವರಿಗೆ ಯಾವುದೇ ಕಾನೂನು ಕೆಲಸವನ್ನು ಮಾಡಿಕೊಡುವ ಅವಕಾಶ ಸಿಕ್ಕಿಲ್ಲ. ಅವರು ಬ್ಯಾಂಕಿಂಗ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡ ವಿಷಯ ತಿಳಿದ ತಕ್ಷಣ ಅವರ ಕೆಲಸ ಕೈಬಿಡಲಾಗಿದೆ ಎಂದು ಬಕ್ಷಿ ಸ್ಪಷ್ಟನೆ ನೀಡಿದ್ದರು.

ಗೀತಾಂಜಲಿ ಸಮೂಹದ ಬಗೆಗಿನ ಆರೋಪ 2015 ಮತ್ತು 16ರಲ್ಲಿ ಪ್ರಧಾನಿ ಕಚೇರಿಗೆ ತಲುಪಿದ್ದರೂ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿದ್ದ ಅರುಣ್ ಜೇಟ್ಲಿಯವರ ಮಗಳು ಹಾಗೂ ಅಳಿಯ ಚೋಕ್ಸಿಯವರ ಕಂಪನಿಯ ಜತೆ ಸಂಬಂಧ ಹೊಂದಿದ್ದರು. ಇದು ಮೌನಸಮ್ಮತಿಯ ಸ್ಪಷ್ಟ ನಿದರ್ಶನ ಎಂದು ಕಾಂಗ್ರೆಸ್ ಆಪಾದಿಸಿದೆ.

ಆದರೆ ಬಿಜೆಪಿ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಕೆಲವೊಮ್ಮೆ ವಕೀಲರು ಪ್ರಕರಣದ ಹೆಚ್ಚಿನ ವಿವರ ಪಡೆಯದೇ ಪ್ರಕರಣ ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಆದರೆ ಹಗರಣ ತಿಳಿದ ಬಳಿಕ ಹಣ ವಾಪಸ್ ಮಾಡಲಾಗಿದೆ. ಇದರಲ್ಲಿ ದೊಡ್ಡ ವ್ಯವಹಾರ ಏನು ಬಂತು ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News