ಉದ್ಯೋಗಿಗಳಿಗೆ 600 ಕಾರುಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡಿದ ಗುಜರಾತ್ ವಜ್ರೋದ್ಯಮಿ

Update: 2018-10-25 11:48 GMT

ಸೂರತ್, ಅ. 25: ಗುಜರಾತ್ ರಾಜ್ಯದ ಖ್ಯಾತ ವಜ್ರೋದ್ಯಮಿ ಹಾಗೂ ಶ್ರೀ ಹರಿ ಕೃಷ್ಣ ಎಕ್ಸ್ ಪೋರ್ಟ್ಸ್ ಅಧ್ಯಕ್ಷ ಸಾವ್ಜಿ ಧೊಲಕಿಯಾ ಅವರು ಈ ದೀಪಾವಳಿ ಹಬ್ಬದ ನಿಮಿತ್ತ ತಮ್ಮ ಅರ್ಹ ಉದ್ಯೋಗಿಗಳಿಗೆ ಹಾಗೂ ವಜ್ರ ಕೆಲಸಗಾರರಿಗೆ 600 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಸತತ ನಾಲ್ಕನೇ ವರ್ಷ ಅವರು ತಮ್ಮ ಉದ್ಯೋಗಿಗಳಿಗೆ ಕಾರು ಉಡುಗೊರೆ ನೀಡಿದ್ದಾರೆ.

ಮೊದಲ ಬಾರಿಗೆ  ಭಿನ್ನ ಸಾಮರ್ಥ್ಯದ ಮಹಿಳಾ ಉದ್ಯೋಗಿಯೂ ಸೇರಿದಂತೆ ಕಂಪೆನಿಯ ನಾಲ್ಕು ಉದ್ಯೋಗಿಗಳು ದೆಹಲಿಗೆ ಆಗಮಿಸಿದ್ದು ಅವರಿಗೆ ಉಡುಗೊರೆಯಾಗಿ ನೀಡಲಾದ ಕಾರುಗಳ ಕೀಲಿಕೈಗಳನ್ನು ಪ್ರಧಾನಿ ನರೇಂದ್ರ ಮೋದಿ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಧೊಲಕಿಯಾ ತಮ್ಮ ಫೇಸ್‍ಬುಕ್ ಪುಟದಲ್ಲಿ ಹೇಳಿಕೊಂಡು ಫೋಟೋ ಪೋಸ್ಟ್ ಮಾಡಿದ್ದಾರೆ.

ಈ ಲಾಯಲ್ಟಿ ಕಾರ್ಯಕ್ರಮದನ್ವಯ 1,600 ಮಂದಿ ಉದ್ಯೋಗಿಗಳು ಆಯ್ಕೆಯಾಗಿದ್ದು ಅವರಲ್ಲಿ 600 ಮಂದಿ ಕಾರುಗಳನ್ನು ಪಡೆಯಲು ನಿರ್ಧರಿಸಿದರೆ 900 ಮಂದಿ ನಿರಖು ಠೇವಣಿ ಪತ್ರಗಳನ್ನು ಪಡೆಯಲು ನಿರ್ಧರಿಸಿದ್ದರು.

ಧೊಲಕಿಯಾ ಅವರು ತಮ್ಮ ಉದ್ಯೋಗಿಗಳಿಗೆ ನೀಡಿದ ರೆನಾಲ್ಟ್ ಕ್ವಿಡ್ ಹಾಗೂ ಮಾರುತಿ ಸುಝುಕಿ ಸೆಲೆರಿಯೋ ಕಾರುಗಳ ಮಾರುಕಟ್ಟೆ ಬೆಲೆ ಕ್ರಮವಾಗಿ ರೂ 4.4 ಲಕ್ಷ ಹಾಗೂ ರೂ 5.38 ಲಕ್ಷ ಆಗಿದೆ.

2016ರಲ್ಲಿ ಧೊಲಕಿಯಾ ಅವರು ತಮ್ಮ ಉದ್ಯೋಗಿಗಳಿಗೆ 400 ಫ್ಲ್ಯಾಟುಗಳು ಹಾಗೂ 1,260 ಕಾರುಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡಿದ್ದರೆ ಅದಕ್ಕೂ ಮುಂಚಿನ ವರ್ಷ 491 ಕಾರುಗಳು ಹಾಗೂ 200 ಫ್ಲ್ಯಾಟ್ ವಿತರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News