ಮಡಿಕೇರಿ: ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿದ ಪೇಜಾವರ ಸ್ವಾಮೀಜಿ

Update: 2018-10-25 12:15 GMT

ಮಡಿಕೇರಿ ಅ.25: ಜಾತಿ, ಮತ, ಧರ್ಮವನ್ನು ಮರೆತು ನೆರೆಸಂತ್ರಸ್ಥರಿಗೆ ಸೂಕ್ತ ರೀತಿಯಲ್ಲಿ ಸಹಾಯ ಮಾಡುವುದೇ ಜನಾರ್ಧನ ಸೇವೆ ಎಂದು ಪೇಜಾವರ ಮಠಾಧೀಶ ಶ್ರೀಶ್ರೀ ವಿಶ್ವೇಶತೀರ್ಥ ಪಾದಂಗಳ ಹೇಳಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಪ್ರಕೃತ್ತಿ ವಿಕೋಪ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿ, ಜನಾರ್ಧನ ಸೇವೆ ಎಂದರೆ ಕೇವಲ ಭಕ್ತಿಮಾರ್ಗವಾದ ದೇವರ ಪೂಜೆ, ಭಜನೆ, ಅಭಿಷೇಕ, ರಥೋತ್ಸವ, ಪಲ್ಲಕ್ಕಿ ಉತ್ಸವಗಳಲ್ಲ. ನಮ್ಮಲ್ಲಿರುವ ಶೇ.1 ಭಾಗದ ಸಂಪತ್ತನ್ನಾದರೂ ಸಂತ್ರಸ್ಥರಿಗೆ ನೀಡಿ ನೆರವಿಗೆ ಮುಂದಾಗುವುದೇ ದೇವರ ಸೇವೆಯಾಗುತ್ತದೆ ಎಂದು ಹೇಳಿದರು. ಸಂಕಷ್ಟಕಾಲದಲ್ಲಿ ಸಂತ್ರಸ್ಥರ ನೆರವಿಗೆ ಎಲ್ಲರೂ ಧಾವಿಸುವಂತೆಯೂ ಸ್ವಾಮೀಜಿಗಳು ಕರೆ ನೀಡಿದರು.

ಕೊಡಗು ಜಿಲ್ಲೆಯ ಸಂತ್ರಸ್ಥರಿಗಾಗಿ 10 ಲಕ್ಷ ರೂ., ಕೇರಳ ರಾಜ್ಯದ ಸಂತ್ರಸ್ಥರಿಗಾಗಿ 10 ಲಕ್ಷ ರೂ.ಗಳನ್ನು ಪೇಜಾವರ ಶ್ರೀಗಳ ಟ್ರಸ್ಟ್ ನಿಂದ ನೀಡುವುದಾಗಿಯೂ ಪೇಜಾವರ ಶ್ರೀಗಳು ಪ್ರಕಟಿಸಿದರು.

ತಾನು ಕೇರಳಕ್ಕೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಖುದ್ದಾಗಿ ವೀಕ್ಷಿಸಿ ಸಂತ್ರಸ್ಥರಲ್ಲಿ 60 ಮಂದಿಗೆ ನೆರವು ನೀಡಿದ್ದಾಗಿ ಹೇಳಿದ ಪೇಜಾವರ ಶ್ರೀಗಳು, ಉಡುಪಿಯ ಪರ್ಯಾಯ ಶ್ರೀ ಪಾಲಿಮಾರು ಶ್ರೀಗಳೊಂದಿಗೆ ಚರ್ಚಿಸಿ ಕೊಡಗಿಗೂ ನೆರವನ್ನು ನೀಡುವುದಾಗಿ ಹೇಳಿದರು.

ಕೊಡಗಿನಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಶ್ರೀಗಳಿಗೆ ಮಾಹಿತಿ ನೀಡಿದರು. 

ಮಕ್ಕಂದೂರು, ಉದಯಗಿರಿ ಮತ್ತು ಮದೆನಾಡು ಗ್ರಾಮಗಳಲ್ಲಿನ ಭೂಕುಸಿತ ಪ್ರದೇಶಗಳಿಗೆ ಸ್ವಾಮೀಜಿ ಭೇಟಿ ನೀಡಿ ಅನಾಹುತಗಳನ್ನು ವೀಕ್ಷಿಸಿದರು. ಸ್ಥಳದಲ್ಲಿದ್ದ ಸಂತ್ರಸ್ಥರಿಗೆ ಸಾಂತ್ವನವನ್ನೂ ಹೇಳಿದ ಸ್ವಾಮೀಜಿ ಧೈರ್ಯಕಳೆದುಕೊಳ್ಳದಂತೆ ಸಲಹೆ ನೀಡಿದರು. 

ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗದೀಶ್, ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಮಾಜಿ ಅಧ್ಯಕ್ಷ ಕೆ.ಎಸ್.ರಮೇಶ್ ಹೊಳ್ಳ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News