ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜಾತ್ಯಾತೀತ ಪಕ್ಷಗಳು ಒಂದಾಗಬೇಕು: ಸಚಿವ ದೇಶಪಾಂಡೆ

Update: 2018-10-26 11:52 GMT

ಸೊರಬ,ಅ.26: ದೇಶಕ್ಕೆ ಮಾರಕವಾಗಿರುವ ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜಾತ್ಯಾತೀತ ವ್ಯವಸ್ಥೆಯಲ್ಲಿ ವಿಶ್ವಾಸ ಹೊಂದಿರುವ ಪಕ್ಷಗಳು ಒಂದುಗೂಡಬೇಕಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು.

ಶುಕ್ರವಾರ ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, 2014ರಲ್ಲಿ ಮೋದಿಯವರು ಕೊಟ್ಟ ಭರವಸೆಯಂತೆ ಉದ್ಯೋಗ ಸೃಷ್ಟಿ, ರೈತರ ಬೆಳೆಗಳಿಗೆ ಯೋಗ್ಯ ಬೆಲೆ, ಭದ್ರತೆ, ಕಪ್ಪು ಹಣ ವಾಪಾಸ್ಸು ತರುವುದು ಸೇರಿದಂತೆ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ರಾಜ್ಯದ ಜನರಿಗೆ ಅನೇಕ ಜನಪರ, ರೈತಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಡಳಿತ ಜನ ಮೆಚ್ಚುಗೆ ಪಡೆದಿದೆ. ಜಾತ್ಯತೀತ ಪಕ್ಷಗಳು ಒಂದುಗೂಡಿ ಬಿಜೆಪಿಯನ್ನು ಹೊರಗಿಡಲು ಹೊಸ ಪ್ರಯೋಗಕ್ಕೆ ಚಾಲನೆ ನೀಡಿದ್ದೇವೆ ಎಂದರು.

ದೇಶಕ್ಕೆ ಮಾರಕವಾಗಿರುವ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜಾತ್ಯತೀತ ಪಕ್ಷಗಳು ಒಗ್ಗೂಡುವ ಉದ್ದೇಶದಿಂದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯದ ಹಿರಿಯ ಮುಖಂಡರುಗಳು ಪರಸ್ಪರ ಚರ್ಚಿಸಿ ಮೈತ್ರಿ ಒಪ್ಪಂದ ಮಾಡಿಕೊಂಡು ಮಂಡ್ಯ, ರಾಮನಗರ ಜೆಡಿಎಸ್‍ಗೆ, ಬಳ್ಳಾರಿ, ಜಮಖಂಡಿ ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದ್ದು, ಶಿವಮೊಗ್ಗ ಕ್ಷೇತ್ರವನ್ನು ದೇವೇಗೌಡರ ಅಪೇಕ್ಷೆಯಂತೆ ದೀನ ದಲಿತರ, ಬಡವರ, ರೈತಪರ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪನವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ ಎಂದು ಹೇಳಿದರು.

ಉಪಚುನಾವಣೆ ಅವಶ್ಯಕತೆ ಇರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಆಯೋಗ ಘೋಷಿಸಿರುವಂತೆ ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಚುನಾವಣೆಯನ್ನು ಎದುರಿಸಬೇಕಾಗಿದೆ. ನ.3 ರಂದು ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಗಳು 2019ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿದೆ. ವ್ಯತ್ಯಾಸಗಳನ್ನು ಬದಿಗೊತ್ತಿ ಮೈತ್ರಿಕೂಟದ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ಜೊತೆಗೂಡಿ ಶ್ರಮಿಸಬೇಕೆಂದು ಕರೆ ನೀಡಿದ ಅವರು, ಜಿಲ್ಲಾದ್ಯಂತ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮಧು ಬಂಗಾರಪ್ಪರವರ ಗೆಲುವು ನಿಶ್ಚಿತ ಎಂದರು.

ಈ ಸಂದರ್ಭ ಕೆಪಿಸಿಸಿ ಉಪಾಧ್ಯಕ್ಷ  ಮಂಜುನಾಥ್ ಭಂಡಾರಿ, ಕಾರ್ಯದರ್ಶಿ ಸಿ.ವಿ. ರಾಜಪ್ಪ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ತಿ.ನಾ. ಶ್ರೀನಿವಾಸ್, ಬ್ಲಾಕ್ ಅಧ್ಯಕ್ಷ ಜೆ.ಶಿವಾನಂದಪ್ಪ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಹೆಚ್.ಗಣಪತಿ, ಪ್ರಮುಖರಾದ ರಾಜು ಎಂ. ತಲ್ಲೂರು, ಕೆ.ಮಂಜುನಾಥ್, ಎಂ.ಡಿ.ಶೇಖರ್, ಪ್ರಶಾಂತ್ ಮೇಸ್ತ್ರೀ, ಜಿ.ಕೆರಿಯಪ್ಪ, ಕರುಣಾಕರ, ಹಿರೇಕೌಂಶಿ ರಶೀದ್, ಅಹ್ಮದ್ ಶರೀಫ್, ಸುಮಾ ಗಜಾನನ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News