ಲಕ್ಷ ಮತಗಳ ಅಂತರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು: ಸಚಿವ ಹೆಚ್.ಡಿ.ರೇವಣ್ಣ

Update: 2018-10-26 12:18 GMT

ಶಿವಮೊಗ್ಗ, ಅ. 26: ಪ್ರಸ್ತುತ ನಡೆಯುತ್ತಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಧು ಬಂಗಾರಪ್ಪರವರು ಲಕ್ಷ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕೋಮುವಾದಿ ಪಕ್ಷ ಬಿಜೆಪಿ ದೂರವಿಡುವ ಏಕೈಕ ಉದ್ದೇಶದಿಂದ ಜಾತ್ಯತೀತ ಪಕ್ಷಗಳು ಒಂದಾಗಿವೆ ಚುನಾವಣೆ ಎದುರಿಸುತ್ತಿವೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರಿಯಲಿದೆ ಎಂದರು. 

ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದು ಸರಿಸುಮಾರು 6 ತಿಂಗಳಾಗುತ್ತಾ ಬಂದಿದ್ದು, ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳ ಅನುಷ್ಠಾನಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಸಹಕಾರಿ ಬ್ಯಾಂಕ್‍ಗಳಲ್ಲಿದ್ದ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು. 

ನವೆಂಬರ್ 29 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಬೃಹತ್ ಸಮಾವೇಶದಲ್ಲಿ ಸಾಲದಿಂದ ಋಣಮುಕ್ತರಾದ ರೈತರಿಗೆ ಸಾಲಮನ್ನಾ ಪತ್ರ ನೀಡಲಾಗುವುದು. ಶಿಕ್ಷಣ ಇಲಾಖೆಗೆ 1400 ಕೋಟಿ ರೂ. ಮೀಸಲಿಡಲಾಗಿದ್ದು, ಶಾಲಾ-ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. 

ಜೆಡಿಎಸ್-ಅಪ್ಪ ಮಕ್ಕಳ ಪಕ್ಷ ಎಂದು ಬಿಜೆಪಿಯವರು ಪದೆ ಪದೇ ಹೇಳುತ್ತಾರೆ. ಬಿಜೆಪಿಯಲ್ಲಿಯೂ ಕುಟುಂಬ ರಾಜಕಾರಣವಿರುವುದನ್ನು ಆ ಪಕ್ಷದ ನಾಯಕರು ಅರಿತುಕೊಳ್ಳಬೇಕಾಗಿದೆ. ಜೆಡಿಎಸ್ ಪಕ್ಷ ಯಾವುದೇ ವರ್ಗಕ್ಕೆ ಸೀಮಿತವಲ್ಲ. ನಮ್ಮ ಕುಟುಂಬದಲ್ಲಿ ಯಾವುದೇ ವೈಮನಸ್ಸಿಲ್ಲ ಎಂದು ಇದೇ ಸಂದರ್ಭದಲ್ಲಿ ಹೆಚ್.ಡಿ.ರೇವಣ್ಣ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News