ಚಿಕ್ಕಮಗಳೂರು ಜಿಲ್ಲಾಧಿಕಾರಿಯ ಕಾರು ಅಪಘಾತ: ಅಪಾಯದಿಂದ ಪಾರು

Update: 2018-10-26 12:47 GMT

ಚಿಕ್ಕಮಗಳೂರು, ಅ.26: ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಳ ಪರಿಶೀಲನೆಗಾಗಿ ಬಾಬಾ ಬುಡನ್‍ಗಿರಿಗೆ ತೆರಳುತ್ತಿದ್ದ ಜಿಲ್ಲಾಧಿಕಾರಿ ಕಾರು ಅಪಘಾತಕ್ಕೀಡಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದ್ದು, ಅದೃಷ್ಟವಶಾತ್ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶ್ರೀರಾಮಸೇನೆ ವತಿಯಿಂದ ಅ.28ರಂದು ದತ್ತಪೀಠದಲ್ಲಿ ದತ್ತಮಾಲಾ ಅಭಿಯಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಾಬಾ ಬುಡನ್‍ಗಿರಿ ಆವರಣದಲ್ಲಿ ಕೈಗೊಂಡಿರುವ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಮ್ಮ ಸರಕಾರಿ ವಾಹನದಲ್ಲಿ ದತ್ತಪೀಠಕ್ಕೆ ತೆರಳುತ್ತಿದ್ದರು. ಈ ವೇಳೆ ಮುಳ್ಳಯ್ಯನಗಿರಿ ಮಾರ್ಗದ ಚನ್ನಗೊಂಡನಹಳ್ಳಿ ತಿರುವಿನಲ್ಲಿ ದತ್ತಪೀಠದಿಂದ ಬರುತ್ತಿದ್ದ ಹಾಸನ ಮೂಲದ ಫೋರ್ಡ್ ಐಕಾನ್ ಕಾರು ಜಿಲ್ಲಾಧಿಕಾರಿ ಕುಳಿತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದ್ದು, ಘಟನೆಯಲ್ಲಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ಯಾವುದೇ ಪ್ರಾಣಾಪಾಯವಿಲ್ಲದಂತೆ ಪಾರಾಗಿದ್ದಾರೆ. ಪ್ರವಾಸಿಗರ ಕಾರಿಗೂ ಸ್ವಲ್ಪ ಹಾನಿಯಾಗಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆಂದು ತಿಳಿದು ಬಂದಿದೆ.

ಘಟನೆಯಲ್ಲಿ ಜಿಲ್ಲಾಧಿಕಾರಿ ಪ್ರಯಾಣಿಸುತ್ತಿದ್ದ ಕಾರಿನ ಬಂಪರ್ ಮತ್ತು ಇಂಡಿಕೇಟರ್ ಗೆ ಹಾನಿಯಾಗಿದೆ. ಹಾಸನ ಮೂಲದ ಫೋರ್ಡ್ ಐಕಾನ್ ಕಾರ್ ನಲ್ಲಿ ನಾಲ್ವರು ಯುವಕರು ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News