ಇತಿಹಾಸದ ಅಧ್ಯಯನ ಅಗತ್ಯ: ಅನಂತಕುಮಾರ್ ಹೆಗಡೆ

Update: 2018-10-26 13:53 GMT

ಬೆಳಗಾವಿ, ಅ.26: ನಮ್ಮ ಹಿರಿಯರು ಮಾಡಿದ ಸರಿ ತಪ್ಪುಗಳನ್ನು ಅರಿತು ಮುಂದೆ ಎಚ್ಚರಿಕೆಯ ಹೆಜ್ಜೆ ಇಡಲು ಇತಿಹಾಸ ಅರಿತುಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ಕಿತ್ತೂರು ಕೋಟೆ ಆವರಣದಲ್ಲಿ ಗುರುವಾರ ರಾತ್ರಿ ವೀರರಾಣಿ ಕಿತ್ತೂರು ಚನ್ನಮ್ಮ ವೇದಿಕೆಯಲ್ಲಿ ನಡೆದ ಮೂರು ದಿನಗಳ ‘ಕಿತ್ತೂರು ಉತ್ಸವ’ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಭವ್ಯ, ಸುದೀರ್ಘ ಹಾಗೂ ವಿಶಿಷ್ಟ ಇತಿಹಾಸ ನಮ್ಮದು. ಶಾಸನ, ಭಾಷೆ, ಲಿಪಿ, ನಮ್ಮ ಉಡುಗೆ ತೊಡುಗೆಗಳು, ಆಹಾರ ಪದ್ಧತಿಗಳು ಕೂಡ ನಮ್ಮ ಭವ್ಯ ಇತಿಹಾಸ. ರಾಜರ ಆಳ್ವಿಕೆ ಇತಿಹಾಸವಲ್ಲ, ಭಾಷೆ, ಲಿಪಿಗಳು ಇತಿಹಾಸವನ್ನು ಸಾರುತ್ತವೆ ಎಂದು ಅವರು ಹೇಳಿದರು.

ಇಂದಿನ ರಷ್ಯಾ ಕೃಷ್ಣನ ಮಗ ಪ್ರದ್ಯುಮ್ನ ಆಳಿದ ಪ್ರದೇಶವಾಗಿದೆ. ಶಿಲಾಶಾಸನ, ಮುಕ್ಕಾದ ಕಂಬಗಳು, ಮುರಿದಬಿದ್ದ ಕೋಟೆಗಳ ಅಧ್ಯಯನ ಅಷ್ಟೇ ಮಹತ್ವವಲ್ಲ, ಕಲೆ, ಸಂಸ್ಕೃತಿ ಮತ್ತು ಭಾಷೆಯ ಹುಟ್ಟು ಬೆಳವಣಿಗೆ ಕೂಡ ಇತಿಹಾಸವಾಗಿದೆ ಎಂದು ಅನಂತಕುಮಾರ್ ಹೆಗಡೆ ತಿಳಿಸಿದರು.

ಕರ್ನಾಟಕದ ಇತಿಹಾಸ ಅಧ್ಯಯನ ಕೇಂದ್ರ ಕಿತ್ತೂರಿನಲ್ಲಿ ಸ್ಥಾಪನೆಯಾಗುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅನಂತಕುಮಾರ್ ಹೆಗಡೆ, ಉತ್ಸವದಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ಮಾತ್ರ ಮುಖ್ಯವಲ್ಲ. ಪರಂಪರೆಯ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ಸಿಪಾಯಿ ದಂಗೆ ಹೆಸರಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಅವಮಾನವನ್ನು ಇತಿಹಾಸಕಾರರು ಮಾಡಿದರು. ನಾಡಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ನಮ್ಮ ಯುವಕರಿಗೆ ನಾಯಕರಾಗಬೇಕು. ಆದರೆ, ಇತಿಹಾಸದಲ್ಲಿ ಇವರ ಹೋರಾಟ ಮರೆಮಾಚುವ ಪ್ರಯತ್ನ ನಡೆದಿದೆ ಈ ಬಗ್ಗೆ ನಾವೆಲ್ಲ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.

ನಂತರ ಮಾತನಾಡಿದ ಶಾಸಕ ಮಹಾಂತೇಶ ಕೌಜಲಗಿ ಅವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚನ್ನಮ್ಮ ಹೆಸರಿಡಲು ರಾಜ್ಯ ಸರಕಾರದಿಂದ ಕಳುಹಿಸುವ ಪ್ರಸ್ತಾವನೆಗೆ ಬೆಂಬಲಿಸಿ ಶೀಘ್ರದಲ್ಲೇ ನಾಮಕರಣಕ್ಕೆ ಸಹಕರಿಸಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಕೋರಿದರು.

ಸಮಾರೋಪ ನುಡಿಗಳನ್ನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾಘಂಟಿ, ಕನಸಿಲ್ಲದ, ನೆನಪಿಲ್ಲದ ಜನರಿಂದ ಇತಿಹಾಸ ಸೃಷಿಸುವುದು ಸಾಧ್ಯವಿಲ್ಲ. ನಾಡರಕ್ಷಣೆಗೆ ಹೋರಾಡಿದ ಮಹನೀಯರ ಹೆಸರನ್ನು ಮಕ್ಕಳಿಗೆ ಇಡುವ ಮೂಲಕ ಇತಿಹಾಸ ಮೆಲಕು ಹಾಕುವ ಕೆಲಸವಾಗಿದೆ ಎಂದರು.

ಕೇಂದ್ರೀಯ ಪಠ್ಯಕ್ರಮದಲ್ಲಿ ಸೇರಿಸಲು ಮನವಿ: ಐಸಿಎಸ್ ಮತ್ತು ಕೇಂದ್ರೀಯ ಪಠ್ಯಕ್ರಮದಲ್ಲಿ ಚನ್ನಮ್ಮ ಸೇರಿದಂತೆ ಸ್ಥಳೀಯ ಹೋರಾಟಗಾರರ ಕುರಿತು ಆಂಗ್ಲ ಅಥವಾ ಹಿಂದಿ ಭಾಷೆಯಲ್ಲಿ ಕಲಿಸುವ ಅಗತ್ಯವಿದೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಮಲ್ಲಿಕಾ ಘಂಟಿ ಮನವಿ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಮಹಾಂತೇಶ ದೊಡ್ಡಗೌಡರ ವಹಿಸಿದ್ದರು. ನಿಚ್ಚಣಿಕೆಯ ಶ್ರೀ ಗುರು ಮಡಿವಾಳೇಶ್ವರ ಪಂಚಾಕ್ಷರಿ ಮಹಾಸ್ವಾಮಿ ಸಾನಿಧ್ಯ ವಹಿಸಿದ್ದರು. ಬೈಲಹೊಂಗಲ ತಾಲೂಕು ಪಂಚಾಯತ್ ಅಧ್ಯಕ್ಷೆ ಶೈಲಾ ಸಿದ್ರಾಮಣಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ್ ಮತ್ತಿತರರು ಉಪಸ್ಥಿತರಿದ್ದರು. ಬೈಲಹೊಂಗಲ ಉಪಭಾಗಾಧಿಕಾರಿ ಶಿವಾನಂದ ಭಜಂತ್ರಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News