ದತ್ತಪೀಠಕ್ಕೆ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ನೇಮಕ: ಅರ್ಜಿ ವಿಚಾರಣೆ ಮುಂದುವರಿಸಲು ಹೈಕೋರ್ಟ್ ತೀರ್ಮಾನ

Update: 2018-10-26 14:52 GMT

ಬೆಂಗಳೂರು, ಅ.26: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯ ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸುವ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಮುಂದುವರಿಸಲು ಹೈಕೋರ್ಟ್ ಶುಕ್ರವಾರ ತೀರ್ಮಾನಿಸಿದೆ.

ದತ್ತಾತ್ರೇಯ ಪೀಠದಲ್ಲಿ ಪೂಜೆ ವಿಧಿವಿಧಾನ ನೆರೆವೇರಿಸಲು ಮುುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್‌ರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವಧರ್ನಾ ಸಮಿತಿ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅರ್ಜಿಯ ಕಳೆದ ವಿಚಾರಣೆ ಸಂದರ್ಭದಲ್ಲಿ ದತ್ತಾತ್ರೇಯ ಪೀಠದ ವಿವಾದ ಸಂಬಂಧ ರಾಜ್ಯ ಸರಕಾರಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿರುವ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಸರಕಾರಕ್ಕೆ ಸೂಚಿಸಿದ್ದ ಹೈಕೋರ್ಟ್, ವಿಚಾರಣೆಯನ್ನು ಅ.26ಕ್ಕೆ ಮುಂದೂಡಿತ್ತು. ಅದೇ ರೀತಿಯಾಗಿ ಶುಕ್ರವಾರ ಅರ್ಜಿ ವಿಚಾರಣೆಗೆ ಬಂದಾಗ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿರುವ ನ್ಯಾಯಾಂಗ ನಿಂದನೆ ಅರ್ಜಿಯು, ಹೈಕೋರ್ಟ್‌ನಲ್ಲಿರುವ ಈ ಅರ್ಜಿ ವಿಚಾರಣೆಗೆ ಅಡ್ಡಿಯಾಗುವುದಿಲ್ಲ ಎಂದು ಸರಕಾರಿ ವಕೀಲರು ಮತ್ತು ಅರ್ಜಿದಾರರ ಪರ ವಕೀಲರು ತಿಳಿಸಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದುವರಿಸುವುದಾಗಿ ನಿರ್ಧಾರ ಪ್ರಕಟಿಸಿದೆ.

ರಾಜ್ಯ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಆಯುಕ್ತರು 2018ರ ಮಾರ್ಚ್ 19ರಂದು ಹೊರಡಿಸಿರುವ ಆದೇಶ ಸಂಬಂಧ ಮುಂದಿನ ಯಾವುದೇ ಕ್ರಮ ಜರುಗಿಸದಂತೆ ಸರಕಾರಕ್ಕೆ ಸೂಚಿಸಿ ಹಿಂದೆ ಹೊರಡಿಸಿದ್ದ ಮಧ್ಯಂತರ ನಿರ್ದೇಶನವನ್ನು ನ್ಯಾಯಪೀಠ ಇದೇ ವೇಳೆ ವಿಸ್ತರಿಸಿತು. 2018ರ ಮಾರ್ಚ್ 19ರ ಆದೇಶ ಜಾರಿಗೊಳಿಸುವುದಿಲ್ಲ ಎಂದು ಸರಕಾರವೇ ಮುಚ್ಚಳಿಕೆ ನೀಡಿದ್ದರಿಂದ ಹೈಕೋರ್ಟ್ ಈ ಮಧ್ಯಂತರ ನಿರ್ದೇಶನ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News