ನಿವೇಶನಗಳನ್ನು ಶ್ರೀಮಂತರಿಗೆ, ರಾಜಕಾರಣಿಗಳಿಗೆ ಹಂಚಲಾಗಿದೆ: ಪ್ರಮೋದ್ ಮುತಾಲಿಕ್

Update: 2018-10-26 18:30 GMT

ದಾವಣಗೆರೆ,ಅ.26: ಶಾಮನೂರಿನಲ್ಲಿರುವ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರ ಬಡವರಿಗಾಗಿ ನಿವೇಶನ ಮಾಡಿತ್ತು, ಅದರೆ ಅಲ್ಲಿ ಶ್ರೀಮಂತರು ಮತ್ತು ಸ್ಥಿತಿವಂತರು ನಿವೇಶನಗಳನ್ನು ಪಡೆದಿದ್ದು, 69 ನಿವೇಶನಗಳ ಹಂಚಿಕೆ ವಿರುದ್ಧ ಕೋರ್ಟ್‍ನಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇವುಗಳಲ್ಲಿ 21 ಪ್ರಕರಣಗಳಿಗೆ ಬಿ ರಿಪೋರ್ಟ್ ಹಾಕಾಲಾಗಿದ್ದು, ಇವುಗಳ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು. 

ಶುಕ್ರವಾರ ನಗರದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‍ಗೆ ಹಾಜರಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿ ರಹಿತರಿಗೆ ವಿತರಿಸಬೇಕಾದ ನಿವೇಶನಗಳನ್ನು ಅಧಿಕಾರ ಹಾಗೂ ಹಣದ ಬಲದಿಂದ ಉಳ್ಳವರಿಗೆ, ಶ್ರೀಮಂತರಿಗೆ, ರಾಜಕಾರಣಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಅಕ್ರಮವಾಗಿ ಹಂಚಲಾಗಿದೆ. ಇದರ ವಿರುದ್ದ 2013ರಲ್ಲಿ ಕೋರ್ಟ್‍ನಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. 69 ನಿವೇಶನ ಪಡೆದ ಗಣ್ಯರು ಕೋಟ್ಯಾಧೀಶರು, ದೊಡ್ಡ ದೊಡ್ಡ ಹೋಟೆಲ್ ಮಾಲಕರು, ಮನೆಗಳುಳ್ಳವರಾಗಿದ್ದಾರೆ. ಅವರಿಗೆ ಮಾನ-ಮರ್ಯಾದೆ ಎಂಬುದು ಇದ್ದರೆ ಈ ನಿವೇಶನಗಳಲ್ಲಿ ತೆಗೆದುಕೊಳ್ಳದೆ, ಬಡವರಿಗೆ ನೀಡಬೇಕಾಗಿತ್ತು. ಆದರೆ ತಮ್ಮ ಬಂಧುಗಳ ಹೆಸರಿಗೆ ತೆಗೆದುಕೊಂಡಿದ್ದು, ನಾಚಿಕೆಯನ್ನುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

69 ನಿವೇಶನಗಳಲ್ಲಿ ಈಗಾಗಲೇ 21 ನಿವೇಶನಗಳ ಬಿ ರಿಪೋರ್ಟ್ ಹಾಕಲಾಗಿದೆ. ಇವುಗಳ ವಿರುದ್ಧವೂ ಹೈಕೋರ್ಟ್‍ಗೆ ಹೋಗಲಾಗುತ್ತದೆ. ಬಡವರ ನಿವೇಶನ ಯಾವುದೇ ಕಾರಣಕ್ಕೂ ಉಳ್ಳವರ ಪಾಲಾಗದಂತೆ ನೋಡಿಕೊಳ್ಳಲಾಗುತ್ತದೆ. ಅಕ್ರಮವಾಗಿ ನಿವೇಶನ ಪಡೆದವರನ್ನು ಶಿಕ್ಷೆಗೆ ಗುರಿಪಡಿಸಿ, ಜೈಲಿಗೆ ಕಳುಹಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಅಂದಿನ ಜಿಲ್ಲಾಧಿಕಾರಿ ಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ಅವರು ಕೂಡಾ ಅಕ್ರಮ ನಿವೇಶನ ಹಂಚಿಕೆಗೆ ಸಹಕರಿಸಿದ್ದಾರೆ, ಬಡವರಿಗೆ ಅನ್ಯಾಯ ಮಾಡಿದ್ದು ಸರಿಯಲ್ಲ. ಇವರು ವಿರುದ್ಧವೂ ಕ್ರಮಕೈಗೊಳ್ಳಬೇಕಾಗಿದೆ. ಬಡವರಿಗೆ ಅನ್ಯಾಯ ಮಾಡಿದ ಎಲ್ಲರ ವಿರುದ್ಧವೂ ತಾವು ಹೋರಾಟ ಮಾಡುವುದಾಗಿ ತಿಳಿಸಿದರು.

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಪ್ರಶಾಂತ ಮತ್ತೂರು, ರಾಜ್ಯ ಸಂಚಾಲಕ ಪರಶುರಾಮ್ ನಡುಮನಿ, ಮಾಧ್ಯಮ ಪ್ರಮುಖ ವಿನೋದ್, ಮಣಿಕಂಠ ಸರ್ಕಾರ್, ಮತ್ತಿಕುಮಾರ್, ಶರತ್ ಹೆಗಡೆ, ಮೋಹನ್, ನೂತನ್ ಆಚಾರ್ಯ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. 

ಸರ್ಜಾ ಪರ ನಿಂತ ಮುತಾಲಿಕ್ 

ಮೀಟೂ ಅಭಿಯಾನ ನೊಂದ, ಶೋಷಣೆಗೊಳಗಾದ ಮಹಿಳೆಯರ ಪರವಾಗಿರುವ ವೇದಿಕೆ. ಕನ್ನಡ ಚಿತ್ರರಂಗದಲ್ಲಿ ಈ ಅಭಿಯಾನ ಬಹುಚರ್ಚೆಯಲ್ಲಿದೆ.  ನಾವು ಈ ವಿಚಾರದಲ್ಲಿ ಅರ್ಜುನ್ ಸರ್ಜಾ ಪರವಾಗಿ ನಿಲ್ಲುತ್ತೇವೆ. ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡುವಂತ ವ್ಯಕ್ತಿಯಲ್ಲ, ಅವರು ನಿರ್ದೋಷಿ. ಒಬ್ಬ ಸಭ್ಯ ನಟ ನಾಲ್ಕು ರಾಜ್ಯದಲ್ಲೂ ಅವರ ಮೇಲೆ ಒಳ್ಳೆಯ ಅಭಿಪ್ರಾಯವಿದೆ ಎಂದರು. 

ಈ ವಿಚಾರದಲ್ಲಿ ಅರ್ಜುನ್ ಸರ್ಜಾ ಅವರಿಗೆ ನ್ಯಾಯ ಸಿಗಬೇಕೆಂಬುದು ನಮ್ಮ ಆಶಯ. ಇನ್ನು ಕುಕ್ಕೆ ಸುಬ್ರಮಣ್ಯದಲ್ಲಿ ಮಠ ಮತ್ತು ಮಂದಿರದ ನಡುವೆ ವಾಗ್ವಾದ ನಡೆಯುತ್ತಿದೆ. ಮಠದ ಪಾವಿತ್ರ್ಯತೆಯನ್ನು ಹಾಳು ಮಾಡಲು ವ್ಯವಸ್ಥಿತ ಗುಂಪು ಸಂಚು ನಡೆಸಿದೆ ಎಂದರು. ಚೈತ್ರ ಕುಂದಾಪುರ ವಿರುದ್ಧ ಹಲ್ಲೆ ನಡೆದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಚೈತ್ರ ಅವರು ಮಠದ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದಲೇ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಈ ವಿಚಾರವಾಗಿ ನಾನು ಕುಕ್ಕೆ ಸುಬ್ರಮಣ್ಯದಲ್ಲೇ ಬಹಿರಂಗ ಚರ್ಚೆಗೆ ಸಿದ್ದನಾಗಿದ್ದೇನೆ. ನನ್ನ ಜೊತೆ ಯಾರು ಬೇಕಾದರು ಚರ್ಚೆಗೆ ಬರಬಹುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News