ಲಾಲೂ ಪುತ್ರನನ್ನು ಭೇಟಿಯಾದ ಎನ್‌ಡಿಎ ಸಚಿವ!

Update: 2018-10-27 04:13 GMT

ಪಾಟ್ನಾ, ಅ.27: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಹಾಗೂ ಬಿಜೆಪಿ ಬಿಹಾರದಲ್ಲಿ ಸಮಾನ ಸಂಖ್ಯೆಯ ಸ್ಥಾನಗಳನ್ನು ಹಂಚಿಕೊಳ್ಳಲಿವೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶುಕ್ರವಾರ ಹೊಸದಿಲ್ಲಿಯಲ್ಲಿ ಜಂಟಿಯಾಗಿ ಘೋಷಿಸಿದ ಬೆನ್ನಲ್ಲೇ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹಾ, ವಿರೋಧ ಪಕ್ಷದ ಮುಖಂಡ ತೇಜಸ್ವಿ ಯಾವದ್ ಅವರನ್ನು ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ರಾಜ್ಯದ ಅರ್ವಾಲ್ ಪ್ರವಾಸಿ ಮಂದಿರದಲ್ಲಿ ಉಭಯ ಮುಖಂಡರು ಪರಸ್ಪರ ಭೇಟಿಯಾಗಿ 15 ನಿಮಿಷಗಳ ಕಾಲ ರಹಸ್ಯ ಚರ್ಚೆ ನಡೆಸಿದರು.

ಭಾರತೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ)ದ ಮುಖ್ಯಸ್ಥರಾಗಿರುವ ಕುಶ್ವಾಹ ಎನ್‌ಡಿಎ ತೊರೆಯುತ್ತಾರೆ ಎಂಬ ವದಂತಿಗಳಿಗೆ ಇದು ರೆಕ್ಕೆಪುಕ್ಕ ಒದಗಿಸಿದೆ. ಎರಡು ದಿನಗಳ ಹಿಂದಷ್ಟೇ ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿದ ಕುಶ್ವಾಹ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿಯವರ ಮರು ಆಯ್ಕೆಗೆ ತಮ್ಮ ಪಕ್ಷ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದರು.

ಶುಕ್ರವಾರ ತೇಜಸ್ವಿ ಜತೆಗಿನ ಭೇಟಿ ತೀರಾ ಆಕಸ್ಮಿಕ ಎಂದು ಕುಶ್ವಾಹ ಬಣ್ಣಿಸಿದ್ದಾರೆ. ನ್ಯಾಯಯಾತ್ರೆಯ ಸಂಬಂಧ ಅರ್ವಾಲ್‌ಗೆ ಆಗಮಿಸಿದ್ದ ಆರ್‌ಜೆಡಿ ಮುಖಂಡ ಇದೇ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದೆವು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ ಆರ್‌ಜೆಡಿ ಮುಖಂಡ ರಾಮಾನುಜ ಪ್ರಸಾದ್ ಯಾದವ್, "ಆರ್‌ಎಲ್‌ಎಸ್‌ಪಿ ಮುಖಂಡ ಸೇರಿದಂತೆ ಬಿಜೆಪಿಯನ್ನು ವಿರೋಧಿಸುವ ಎಲ್ಲ ಶಕ್ತಿಗಳ ಜತೆ ಕೈಜೋಡಿಸಲು ನಾವು ಸಿದ್ಧರಿದ್ದೇವೆ. ನಿರ್ಧಾರ ಕೈಗೊಳ್ಳಬೇಕಾದ್ದು ಅವರ ಸರದಿ" ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಬಿಜೆಪಿಯ ನಾಲ್ಕನೇ ಮಿತ್ರಪಕ್ಷವಾದ ಲೋಕಜನಶಕ್ತಿ ಪಕ್ಷದ ಮುಖಂಡ ಚಿರಾಗ್ ಪಾಸ್ವಾನ್ ಕೂಡಾ ಆರ್‌ಜೆಡಿ ಜತೆ ಸಂಪರ್ಕದಲ್ಲಿದ್ದಾರೆ ಎಂದು ಆರ್‌ಜೆಡಿಯ ಮತ್ತೊಬ್ಬ ಮುಖಂಡರು ಬಹಿರಂಗಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News