ಪ.ಪಂ ನಲ್ಲಿ ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಗೆಲುವು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಎಂ.ಶಾಹೀದ್ ವಿಶ್ವಾಸ

Update: 2018-10-27 11:39 GMT

ಮಡಿಕೇರಿ,ಅ.27 :ಕೊಡಗಿನ ಮೂರು ಪಟ್ಟಣ ಪಂಚಾಯ್ತಿಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಕೂಟ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಎಂ.ಶಾಹೀದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‍ಡಿಎ ನೇತೃತ್ವದ ಕೇಂದ್ರ ಸರ್ಕಾರದ ದುರಾಡಳಿತದಿಂದ ದೇಶದ ಎಲ್ಲಾ ಭಾಗಗಳಲ್ಲಿ ಬಿಜೆಪಿ ವಿರೋಧಿ ಅಲೆ ಇದ್ದು, ಕೊಡಗಿನ ಕುಶಾಲನಗರ, ವೀರಾಜಪೇಟೆ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕೂಡ ಬಿಜೆಪಿ ಸೋಲು ಅನುಭವಿಸಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗೆಲುವನ್ನು ಸಾಧಿಸಲಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಪ್ರಜಾಪ್ರಭುತ್ವ ನಾಶವಾಗಿ ರಾಜಾಡಳಿತ ವ್ಯವಸ್ಥೆ ಜಾರಿಯಲ್ಲಿದೆ. ನಿರಂತರ ವಿದೇಶ ಪ್ರವಾಸದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಎಲ್ಲಾ ಭರವಸೆಗಳು ಹುಸಿಯಾಗಿವೆ ಎಂದು ಶಾಹೀದ್ ಆರೋಪಿಸಿದರು.

ಆಯೋಗಗಳು, ರಕ್ಷಣಾ ಪಡೆಗಳು ಸೇರಿದಂತೆ ಪ್ರತಿಯೊಂದು ವಿಭಾಗಗಳಲ್ಲೂ ವಿಭಜನೆ ಮತ್ತು ಗೊಂದಲ ಸೃಷ್ಟಿ ಮಾಡುವ ಕಾರ್ಯದಲ್ಲಿ ಬಿಜೆಪಿ ತೊಡಗಿದೆ. ನಿರಂತರ ಬೆಲೆ ಏರಿಕೆ ಮತ್ತು ಆರ್ಥಿಕ ಕ್ಷೇತ್ರದ ಹಿನ್ನಡೆಯಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ತನ್ನ ಮಿತ್ರ ಸಂಸ್ಥೆಗಳನ್ನು ಓಲೈಸುವುದಕ್ಕಾಗಿ ಯುದ್ಧ ವಿಮಾನಗಳ ಖರೀದಿಗೆ ಮುಂದಾಗುವ ಮೂಲಕ ರಫೆಲ್ ಯುದ್ಧ ವಿಮಾನ ಹಗರಣ ಸೃಷ್ಟಿಯಾಗಿದೆ ಎಂದು ಶಾಹೀದ್ ದೂರಿದರು.

ಅತಿವೃಷ್ಟಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಗೆ ಬಿಜೆಪಿ ಸಂಸದರು ಹಾಗೂ ಕೇಂದ್ರದ ಜನಪ್ರತಿನಿಧಿಗಳ ಕೊಡುಗೆ ಏನು ಎಂದು ಶಾಹೀದ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಮೂಡಾ ಮಾಜಿ ಅಧ್ಯಕ್ಷ ಚುಮ್ಮಿ ದೇವಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ ಹಾಗೂ ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಝಾಕ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News