ಹಲ್ಲೆಗೈದ ಪೊಲೀಸರ ಅಮಾನತುಪಡಿಸದಿದ್ದಲ್ಲಿ ಮೂಡಿಗೆರೆ ಬಂದ್: ಶಾಸಕ ಕುಮಾರಸ್ವಾಮಿ

Update: 2018-10-27 11:59 GMT

ಮೂಡಿಗೆರೆ, ಅ.27: ಮಾಜಿ ಜಿಪಂ ಮಾಜಿ ಸದಸ್ಯ ಅರೆಕುಡಿಗೆ ಶಿವಣ್ಣ ಅವರ ಮೇಲೆ ಇತ್ತೀಚೆಗೆ ಹಲ್ಲೆ ಮಾಡಿದ ಚಿಕ್ಕಮಗಳೂರು ನಗರ ಠಾಣೆಯ ಪಿಎಸ್ಸೈ ರಘು ಸಹಿತ ಎಎಸ್ಸೈ ಹಾಗೂ ಇಬ್ಬರು ಪಿಸಿಗಳನ್ನು ಅಮಾನತುಪಡಿಸದಿದ್ದರೆ ಮೂಡಿಗೆರೆ ಬಂದ್‍ಗೆ ಕರೆ ಕೊಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಜಿ.ಪಂ. ಸದಸ್ಯ ಅರೆಕುಡಿಗೆ ಶಿವಣ್ಣ ಅವರು ಪ್ರಸಕ್ತ ಕೋಮಾರ್ಕ್ ಅಧ್ಯಕ್ಷರಾಗಿದ್ದು, ರೈತರ ಪರವಾಗಿ ನಿರಂತರ ಸೇವೆ ಮಾಡುತ್ತಿದ್ದಾರೆ. ಅಂತವರ ಮೇಲೆ ಪೊಲೀಸರು ಏಕಾಏಕಿ ಹಲ್ಲೆ ಮಾಡಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಶಿವಣ್ಣ ಅವರೇ ಮೊದಲು ಎಎಸ್ಸೈ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ಶಿವಣ್ಣನ ಮೇಲೆ ಹಲ್ಲೆ ಮಾಡಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರೀಶ್ ಪಾಂಡೆ ಸುಳ್ಳು ಹೇಳಿಕೆ ನೀಡಿದ್ದಾರೆ. ಯಾವುದೇ ವ್ಯಕ್ತಿಗೆ ಸಾರ್ವಜನಿಕರಾಗಲಿ ಅಥವಾ ಪೊಲೀಸರಾಗಲಿ ಹಲ್ಲೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಶಿವಣ್ಣರಿಗೆ ನಗರ ಠಾಣೆಯೊಳಗೆ ಪಿಎಸ್ಸೈ, ಎಎಸ್ಸೈ ಮತ್ತು ಇಬ್ಬರು ಪೇದೆಗಳು ಮನಸ್ಸಿಗೆ ಬಂದಹಾಗೆ ಥಳಿಸಿದ್ದಾರೆಂದು ಪೊಲೀಸ್ ಮೂಲಗಳಿಂದಲೇ ನಮಗೆ ಮಾಹಿತಿ ಬಂದಿದೆ ಎಂದು ಶಾಸಕರು ತಿಳಿಸಿದರು.

ಶಿವಣ್ಣ ಅವರ ವಿರುದ್ಧ ಸಾರ್ವಜನಿಕರಾಗಲಿ ಅಥವಾ ಸಾರಿಗೆ ಇಲಾಖೆ ನೌಕರರಾಗಲಿ ದೂರು ನೀಡಲು ಹೋಗಿಲ್ಲ. ಪೊಲೀಸರನ್ನು ಉಳಿಸಿಕೊಳ್ಳಲು ಸಾರ್ವಜನಿಕರಿಂದ ಹಾಗೂ ಸಾರಿಗೆ ನೌಕರರಿಂದ ಬಲತ್ಕಾರವಾಗಿ ದೂರು ದಾಖಲಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಅಲ್ಲದೇ ಚಿಕ್ಕಮಗಳೂರು ಬಸ್ ನಿಲ್ದಾಣದ ಸಿಸಿ ಟಿವಿ ಮತ್ತು ಪೊಲೀಸ್ ಇಲಾಖೆಯೊಳಗಿನ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಬಗ್ಗೆ ತನಿಖೆಯಾಗಬೇಕು. ಆ ವಿಡಿಯೋಗಳನ್ನು ಮಾಧ್ಯಮದವರಿಗೂ ತೋರಿಸಬೇಕೆಂದು ಆಗ್ರಹಿಸಿದ ಅವರು, ಪೊಲೀಸರ ಈ ಸುಳ್ಳು ಪ್ರಕರಣದಿಂದ ಸಾರ್ವಜನಿಕರ ಮೇಲಿರುವ ಒಳ್ಳೆಯ ಅಭಿಪ್ರಾಯಕ್ಕೆ ಚ್ಯುತಿ ಬಾರಬಾರದು. ಆದ್ದರಿಂದ ಈ ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ಮಾಡಬೇಕು. ಪ್ರಕರಣದ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.

ಗ್ರಾಮಾಂತರ ಠಾಣೆಯಲ್ಲಿ ಪಿಎಸ್ಸೈ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಭೂ ಮಾಫಿಯಾದಲ್ಲಿ ಕೈ ಜೋಡಿಸಿದ್ದಾರೆ. ಓರ್ವ ವಕೀಲನ ಮೇಲೆ ಹಲ್ಲೆ, ಬಿಜೆಪಿ ಯುವ ಮೋರ್ಚ ಅಧ್ಯಕ್ಷನ ಮೇಲೆ ಹಲ್ಲೆ, ಫೈನಾನ್ಸ್ ನಲ್ಲಿ 3 ಕೇಜಿ ಚಿನ್ನದ ಹಗರಣ, ಚುನಾವಣೆಯಲ್ಲಿ 87 ಲಕ್ಷ ರೂ. ವಶಪಡಿಸಿಕೊಂಡು ಕಡಿಮೆ ಮೊತ್ತ ತೋರಿಸಿದ ಬಗ್ಗೆ ದೂರುಗಳು ಕೇಳಿ ಬಂದಿವೆ. ಇವೆಲ್ಲದರ ಎಸ್ಪಿ ತನಿಖೆ ನಡೆಸಬೇಕೆಂದ ಅವರು, ಶಿವಣ್ಣನ ಮೇಲೆ ಹಲ್ಲೆ ಮಾಡಿದ ನಾಲ್ವರು ಪೊಲೀಸರನ್ನು ಅಮಾನತುಪಡಿಸದಿದ್ದರೆ ಜಿಲ್ಲಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳ ಎದುರು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News