ಸಣ್ಣಪಕ್ಷಗಳು ಒಂದಾಗದಿದ್ದರೆ 2019ರ ಬಳಿಕ ಚುನಾವಣೆಗಳು ನಡೆಯುವುದಿಲ್ಲ:ಹಾರ್ದಿಕ್ ಪಟೇಲ್

Update: 2018-10-27 14:35 GMT

ಹೊಸದಿಲ್ಲಿ,ಅ.27: ದೇಶಾದ್ಯಂತ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗದಿದ್ದರೆ 2019ರ ಬಳಿಕ ಯಾವುದೇ ಚುನಾವಣೆಗಳು ನಡೆಯುವುದಿಲ್ಲ ಎಂದು ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ ಸಂಭಾಜಿ ಬ್ರಿಗೇಡ್‌ನ 9ನೇ ರಾಜ್ಯ ಸಮ್ಮೇಳನಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮರಾಠಾ ಮತ್ತು ಧನಗರ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಸರಕಾರವು ವಿಫಲಗೊಂಡರೆ 2019ರ ಲೋಕಸಭಾ ಚುನಾವಣೆಗಳು ಬಿಜೆಪಿಯ ಪಾಲಿಗೆ ಒಳ್ಳೆಯದಾಗಿರುವುದಿಲ್ಲ ಎಂದು ಹೇಳಿದರು.

ಮುಂಬರುವ ಚುನಾವಣೆಯು ಮೋದಿ ಮತ್ತು ರೈತರ ನಡುವಿನ ಸ್ಪರ್ಧೆಯಾಗಲಿದೆ. ಜನರು ಖುದ್ದಾಗಿ ಮೋದಿ ಸರಕಾರದ ವಿರುದ್ಧ ಹೋರಾಡಲಿದ್ದಾರೆ ಮತ್ತು ಅವರೊಂದಿಗೆ ಸೇರಲು ತಾನೂ ಬೀದಿಗಿಳಿಯುತ್ತೇನೆ,ಜನರಲ್ಲಿ ಅರಿವು ಮೂಡಿಸುವುದು ತನ್ನ ಕೆಲಸವೇ ಹೊರತು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಲ್ಲ ಎಂದರು.

‘ಮರಾಠಾ ಮೋರ್ಚಾ’ವನ್ನು ರಾಜಕೀಯ ನಾಟಕ ಎಂದು ಬಣ್ಣಿಸಿದ ಅವರು, ಪ್ರತಿಯೊಂದೂ ಪಕ್ಷವು ಅದರಿಂದ ಲಾಭವನ್ನು ಪಡೆಯಲು ಹವಣಿಸುತ್ತಿದೆ ಎಂದರು. ಸರಕಾರವು ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿಯವರ ಸ್ಮಾರಕವನ್ನು ನಿರ್ಮಿಸುವ ಬದಲು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹೆಚ್ಚಿನ ಗಮನ ನೀಡಬೇಕು ಎಂದು ಹಾರ್ದಿಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News