ಛತ್ತೀಸ್‌ಗಢ: ನಕ್ಸಲರ ದಾಳಿಗೆ 4 ಯೋಧರು ಬಲಿ, ಇಬ್ಬರು ಗಂಭೀರ

Update: 2018-10-27 15:21 GMT

ರಾಯ್‌ಪುರ, ಅ.27: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಯೋಧರು ಸಂಚರಿಸುತ್ತಿದ್ದ ವಾಹನವನ್ನು ಮಾವೋವಾದಿ ನಕ್ಸಲರು ಸ್ಫೋಟಿಸಿದಾಗ ನಾಲ್ವರು ಸಿಆರ್‌ಪಿಎಫ್ ಯೋಧರು ಮೃತಪಟ್ಟು ಇತರ ಇಬ್ಬರು ತೀವ್ರವಾಗಿ ಗಾಯಗೊಂಡರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನಕ್ಸಲರು ಆಧುನಿಕ ಸ್ಫೋಟಕ ಸಾಧನ(ಐಇಡಿ ಬ್ಲಾಸ್ಟ್) ಬಳಸಿ ಸಿಆರ್‌ಪಿಎಫ್ ಯೋಧರ ವಾಹನವನ್ನು ಸ್ಫೋಟಿಸಿದ್ದಾರೆ. ಅವಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮುರ್ದಾಂಡದಲ್ಲಿನ ಸಿಆರ್‌ಪಿಎಫ್ ಶಿಬಿರದ ಬಳಿ ಬೆಳಿಗ್ಗೆ 4 ಗಂಟೆ ವೇಳೆಗೆ ಗಸ್ತು ತಿರುಗುತ್ತಿದ್ದ 168ನೇ ಬಟಾಲಿಯನ್‌ನ ಯೋಧರ ವಾಹನವನ್ನು ನೆಲಬಾಂಬು ಇರಿಸಿ ನಕ್ಸಲರು ಸ್ಫೋಟಿಸಿದ್ದಾರೆ ಎಂದು ಬಿಜಾಪುರ ಪೊಲೀಸ್ ಅಧೀಕ್ಷಕ ಮೋಹಿತ್ ಗರ್ಗ್ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ರವಾನಿಸಲಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಛತ್ತೀಸ್‌ಗಢದಲ್ಲಿ ವಿಧಾನಸಭೆಯ ಪ್ರಥಮ ಹಂತದ ಮತದಾನ ನವೆಂಬರ್ 12ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News