ಪ್ರಧಾನಿ ಮೋದಿಯಿಂದ ಎಚ್‌ಎಎಲ್‌ಗೆ ನಷ್ಟ, ಅಂಬಾನಿಗೆ ಬ್ಯಾಂಕ್ ಸಾಲದ ಸಹಾಯ: ಮಲ್ಲಿಕಾರ್ಜುನ ಖರ್ಗೆ

Update: 2018-10-27 15:42 GMT

ಬೆಂಗಳೂರು, ಅ. 27: ರಫೇಲ್ ಯುದ್ಧ ವಿಮಾನ ತಯಾರಿಕೆ ಗುತ್ತಿಗೆಯನ್ನು ಪ್ರಧಾನಿ ಮೋದಿ, ತನ್ನ ಸ್ನೇಹಿತ ಅನಿಲ್ ಅಂಬಾನಿಗೆ ಕೊಡಿಸುವ ಮೂಲಕ ಯೋಜನೆ ಆರಂಭಿಸಲು ಬ್ಯಾಂಕ್ ಸಾಲವನ್ನು ಕೊಡಿಸಿದ್ದಾರೆ. ಆದರೆ, ಸರಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ನಷ್ಟವನ್ನುಂಟು ಮಾಡಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ.

ಶನಿವಾರ ಇಲ್ಲಿನ ಎಚ್‌ಎಎಲ್ ಎಸ್ಸಿ-ಎಸ್ಟಿ ಕಾರ್ಮಿಕರು ಮತ್ತು ಅಧಿಕಾರಿಗಳ ಸಂಘದಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಚ್‌ಎಎಲ್‌ಗೆ ಸಿಗಬೇಕಿದ್ದ ರಫೇಲ್ ಗುತ್ತಿಗೆ ಖಾಸಗಿ ಕಂಪೆನಿ ಪಾಲಾಗಿದ್ದು ಹೇಗೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು

ಯುಪಿಎ ಅವಧಿಯಲ್ಲಿ ರಫೇಲ್ ಯುದ್ದ ವಿಮಾನದ ಇಂಜಿನ್ ತಯಾರಿಕೆ ಗುತ್ತಿಗೆಯನ್ನು ಎಚ್‌ಎಎಲ್‌ಗೆ ನೀಡಲು ತೀರ್ಮಾನಿಸಲಾಗಿತ್ತು. 560 ಕೋಟಿ ರೂ. ತಯಾರಿಕಾ ವೆಚ್ಚದ ಇಂಜಿನ್‌ನನ್ನು ಮೋದಿ, ಈಗ 1,600ಕೋಟಿ ರೂ.ವೆಚ್ಚಕ್ಕೆ ಖಾಸಗಿ ಕಂಪೆನಿಗೆ ನೀಡಿದ್ದಾರೆ ಎಂದು ಟೀಕಿಸಿದರು.

ಎಚ್‌ಎಎಲ್ ಸಂಸ್ಥೆ ಆಧುನಿಕ ತಾಂತ್ರಿಕೆಯನ್ನು ಹೊಂದಿಲ್ಲ ಎಂದು ಕೇಂದ್ರ ಸಚಿವರೇ ಹೇಳುತ್ತಿದ್ದು, ಎಚ್‌ಎಎಲ್‌ನ ಇಂಜಿನಿಯರ್‌ಗಳು ಎಲ್ಲ ರೀತಿಯ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಇಡೀ ದೇಶವೇ ಎಚ್‌ಎಎಲ್ ಸಂಸ್ಥೆಯನ್ನು ಶ್ಲಾಘಿಸಿದ್ದಾರೆ. ಆದರೆ, ಕೆಲವರು ಆ ಸಂಸ್ಥೆಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಫೇಲ್ ಯುದ್ಧ ವಿಮಾನ ತಯಾರಿಕೆ ಗುತ್ತಿಗೆಯನ್ನು ಎಚ್‌ಎಎಲ್‌ಗೆ ನೀಡಿದ್ದರೆ ಸಾವಿರಾರು ಕೋಟಿ ರೂ.ಉಳಿತಾಯ ಆಗುತ್ತಿತ್ತು. ಆದರೆ, ಮೋದಿಯವರು ತನ್ನ ಸ್ವಹಿತಕ್ಕಾಗಿ ಶ್ರೀಮಂತ ಕಂಪೆನಿಗೆ ಸರಕಾರದ ಹಣವನ್ನು ನೀಡಿದ್ದಾರೆ. ಇದೆಲ್ಲವೂ ಜನತೆ ಅರ್ಥವಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ನುಡಿದರು.

ಕೇಂದ್ರ ಸರಕಾರ, ಎಚ್‌ಎಎಲ್ ಕಡೆಗಣಿಸಿ ಖಾಸಗಿ ಕಂಪೆನಿಗಳಿಗೆ ಗುತ್ತಿಗೆ ನಿಡುತ್ತಿದ್ದು, ಆ ಕಂಪೆನಿಗಳು ಬ್ಯಾಂಕ್ ಮೂಲಕ ಸಾಲ ಪಡೆದು ಯೋಜನೆ ಆರಂಭಿಸುತ್ತವೆ. ನಂತರ ಪಡೆದ ಸಾಲ ಹಿಂದಿರುಗಿಸದೆ ವಿದೇಶಕ್ಕೆ ಪರಾರಿಯಾಗುತ್ತವೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

ಜಾತಿಗೆ ಸೀಮಿತ ಸಲ್ಲ: ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ವೇದಿಕೆಯಲ್ಲಿರುವ ಪರಿಷತ್ ಸದಸ್ಯ ರಿಝ್ವಾನ್ ಅರ್ಶದ್, ಮೇಯರ್ ಗಂಗಾಂಬಿಕೆ ಅವರನ್ನು ಜಾತಿಗೆ ಸೀಮಿತಗೊಳಿಸುವುದಿಲ್ಲ. ಆದರೆ, ನನ್ನನ್ನು ದಲಿತ ನಾಯಕ ಎಂದು ಸೀಮಿತಗೊಳಿಸುವುದು ಸಲ್ಲ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ವ್ಯಕ್ತಿ ಅಥವಾ ಮುಖಂಡನನ್ನು ಯಾವುದೇ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಈ ಮನಸ್ಥಿತಿ ಬದಲಾಗಬೇಕಾದ ಅಗತ್ಯವಿದೆ. ಬೇರೆಲ್ಲ ಜಾತಿಯ ನಾಯಕರಂತೆ ನಮ್ಮನ್ನು ಸರ್ವಜನಾಂಗದ ಮುಖಂಡರೆಂದು ಗುರುತಿಸಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕೈಗಾರಿಕೆಗಳಲ್ಲಿ ಯಾವುದೇ ಕಾರಣಕ್ಕೂ ಜಾತಿ ನುಸುಳಬಾರದು. ಇಲ್ಲಿನ ನೌಕರರೆಲ್ಲಾ ಒಂದೇ ಜಾತಿ, ಅದು ಕಾರ್ಮಿಕ ಜಾತಿ. ಏನೇ ಇದ್ದರೂ ಸಂಸ್ಥೆಯನ್ನು ಬದುಕಿಸಿ ಎಂದು ಸಲಹೆ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂವಿಧಾನ ಬರೆಯಲಿಲ್ಲ ಎಂದರು.

‘ಕಾರ್ಮಿಕರ ಉದ್ಯೋಗದ ಅವಧಿಯನ್ನು 12ಗಂಟೆಯಿಂದ 8ಗಂಟೆಗೆ ಸೀಮಿತಗೊಳಿಸಿದ್ದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಹಿಳೆಯರ ಹಕ್ಕಿಗಾಗಿ ಶ್ರಮಿಸಿದರು. ಅಲ್ಲದೆ, ಬಡವರು, ಶೋಷಿತರ ಕಲ್ಯಾಣಕ್ಕಾಗಿ ದುಡಿದ ಅಂಬೇಡ್ಕರ್ ಅವರನ್ನು ಜಾತಿಗೆ ಸೀಮಿತ ಮಾಡಬಾರದು’
-ಮಲ್ಲಿಕಾರ್ಜುನ ಖರ್ಗೆಲೋಕಸಭೆ ಕಾಂಗ್ರೆಸ್ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News