ಸಿದ್ದರಾಮಯ್ಯ ವಿರುದ್ದ ಇನ್ನೊಮ್ಮೆ ಸ್ಪರ್ಧಿಸುವುದಿಲ್ಲ : ಸಚಿವ ಜಿ.ಟಿ.ದೇವೇಗೌಡ

Update: 2018-10-27 15:57 GMT

ಶಿವಮೊಗ್ಗ, ಅ. 27: ರಾಜಕೀಯದಲ್ಲಿ ಶಾಶ್ವತ ಶತ್ರು ಇಲ್ಲ, ಮಿತ್ರರೂ ಇಲ್ಲ. ಹಾಗಾಗಿ ನಾನು ಸಿದ್ದರಾಮಯ್ಯ ವಿರುದ್ಧ ಇನ್ನೊಮ್ಮೆ ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆಯೋ ಅಥವಾ ಕೇಂದ್ರ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿದೆಯೋ ಗೊತ್ತಿಲ್ಲ. ಏಕೆಂದರೆ ಮೇ ತಿಂಗಳಲ್ಲಿ ತೆರವಾದ ಸ್ಥಾನಕ್ಕೆ, ಕೇವಲ ಐದಾರು ತಿಂಗಳಿಗಾಗಿ ಚುನಾವಣೆ ನಡೆಸುವುದರ ಉದ್ದೇಶ ಏನು. ಇದನ್ನು ಆಯೋಗ ಅಥವಾ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಗೆದ್ದವರು ಕೆಲವೇ ತಿಂಗಳ ಅಧಿಕಾರ ನಡೆಸುವ ಬದಲು ಅವರಿಗೆ ಐದು ವರ್ಷ ಪೂರ್ಣಗೊಳಿಸಲು ಬಿಡಿ. ಇಲ್ಲವೇ ಇಂತಹ ಕಾನೂನು ಬಾಹಿರ ಚುನಾವಣೆ ನಡೆಸುವುದನ್ನು ಬಿಡಿ. ಮೋದಿ ಇದನ್ನು ಒಪ್ಪುತ್ತಾರೋ ಇಲ್ಲವೂ ಗೊತ್ತಿಲ್ಲ ಎಂದರು.

ಸಿಎಂ ಕುಮಾರಸ್ವಾಮಿ ರೈತರ ಸಹಕಾರಿ ಸಾಲವನ್ನು ಮನ್ನಾ ಮಾಡಿದ್ದಾರೆ. ವಾಣಿಜ್ಯ ಬ್ಯಾಂಕ್ ಗಳ ಸಾಲ ಮನ್ನಾಗೂ ಕ್ರಮ ಕೈಗೊಂಡಿದ್ದಾರೆ. ಕುಮಾರಸ್ವಾಮಿ 12 ವರ್ಷದ ಹಿಂದೆ ಸಿಎಂ ಆಗಿದ್ದಾಗ ಪದವಿ ಕಾಲೇಜುಗಳನ್ನ ಆರಂಭಿಸಿದ್ದರು. ನಂತರದ ವರ್ಷದಲ್ಲಿ ಮತ್ತೆ ಈಗ ಕಾಲೇಜುಗಳು ಆರಂಭಗೊಳ್ಳುತ್ತಿದ್ದು ಖಾಲಿ ಇರುವ ಹುದ್ದೆಯ ಭರ್ತಿಗೂ ಕ್ರಮ ಕೈಗೊಂಡಿದೆ ಎಂದರು.

ಇನ್ನು ಒಬ್ಬ ವ್ಯಕ್ತಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದನ್ನು ನಿಷೇಧ ಮಾಡುವತ್ತ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಗಮನ ಹರಿಸಬೇಕಿದೆ ಎಂದು ಅವರು ತಮ್ಮ ಅಭಿಪ್ರಾಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News