ಕೌಶಲ್ಯಾಭಿವೃದ್ಧಿಗೆ ಬೃಹತ್ ಪ್ರಮಾಣದ ಜಾಗೃತಿ ಕಾರ್ಯಕ್ರಮ: ಕೆ.ಟಿ. ಕೃಷ್ಣನ್

Update: 2018-10-27 17:24 GMT

ಧಾರವಾಡ, ಅ.27: ಯುವ ಸಮುದಾಯದಲ್ಲಿ ವಿವಿಧ ವೃತ್ತಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸರಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಬೃಹತ್ ಪ್ರಮಾಣದಲ್ಲಿ ಸಮಾಲೋಚನೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಸಚಿವಾಲಯದ ಕಾರ್ಯದರ್ಶಿ ಕೆ.ಟಿ.ಕೃಷ್ಣನ್ ಹೇಳಿದ್ದಾರೆ.

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ 56ಕ್ಕೂ ಹೆಚ್ಚು ಐಟಿಐ ಹಾಗೂ 100ಕ್ಕೂ ಹೆಚ್ಚು ಸಾಮಾನ್ಯ ಕಾಲೇಜುಗಳಿವೆ. ಇಲ್ಲಿನ ಕೋರ್ಸ್‌ಗಳನ್ನು ಪೂರೈಸುವವರಿಗೆ ವಿವಿಧ ವಲಯಗಳಲ್ಲಿ ಇರುವ ಉದ್ಯೋಗಾವಕಾಶಗಳ ಕುರಿತು ಮನವರಿಕೆ ಮಾಡಿಕೊಡಬೇಕು ಎಂದರು.

ಯುವ ಜನತೆಯ ಸವಾಲುಗಳನ್ನು ಗುರುತಿಸಿ ಪರಿಹರಿಸಲು ಜಿಲ್ಲಾಮಟ್ಟದ ಯೋಜನೆ ರೂಪಿಸಬೇಕು. ಶಾಲೆ ಹಾಗೂ ಪಿ.ಯು ಕಾಲೇಜುಗಳಲ್ಲಿ 40 ರಿಂದ 45 ಸಾವಿರ ವಿದ್ಯಾರ್ಥಿಗಳಿದ್ದಾರೆ. ಅವರ ಆಸಕ್ತಿಗನುಗುಣವಾಗಿ ಕೌಶಲ್ಯಗಳನ್ನು ಕಲಿಸಬೇಕು. ಇದಕ್ಕಾಗಿ ತಜ್ಞರ ತಂಡಗಳನ್ನು ರಚಿಸಿ ತರಬೇತಿಗಳನ್ನು ಏರ್ಪಡಿಸಬೇಕು ಎಂದು ಅವರು ಹೇಳಿದರು.

ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಸಹಯೋಗದಲ್ಲಿ ಸಂಚಾರಿ ತರಬೇತಿ ಶಾಲೆ ಆರಂಭಿಸಬೇಕು. ಧಾರವಾಡದ ಸಿಡಾಕ್ ಸಂಸ್ಥೆಯ ನೆರವಿನೊಂದಿಗೆ ಪದವೀಧರರಿಗೆ ತರಬೇತಿಗಳನ್ನು ಆಯೋಜಿಸಲಾಗುವುದು. ಬಿಎ., ಬಿಕಾಂ ನಂತಹ ಪದವಿಗಳನ್ನು ಪಡೆದವರಿಗೆ ಅವರ ಅಂತಿಮ ವರ್ಷದಲ್ಲಿ ಅಪ್ರೆಂಟಿಷಿಪ್ ಆಧಾರಿತ ತರಬೇತಿ ಯೋಜನೆಯಡಿ ಪ್ರವಾಸೋದ್ಯಮ ಗೈಡ್, ಜಿಎಸ್‌ಟಿ ಖಾತೆಗಳ ನಿರ್ವಹಣೆ ಸಹಾಯದಂತಹ ಹೊಸ ಕೋರ್ಸ್‌ಗಳನ್ನು ಅಳವಡಿಸಲು ಚಿಂತನೆ ನೆದಿದೆ ಎಂದು ಕೃಷ್ಣನ್ ವಿವರಿಸಿದರು.

ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದೊಂದಿಗೆ ಒಪ್ಪಂದ ಮಾಡಿಕೊಂಡು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುವುದು. ಹಣಕಾಸು ಮತ್ತು ಸೇವಾ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶಗಳು ಇವೆ. ಆ ಕ್ಷೇತ್ರಕ್ಕೆ ಕೌಶಲ್ಯ ಹೊಂದಿದ ಯುವಕರನ್ನು ಒದಗಿಸುವುದು ಅವಶ್ಯಕವಾಗಿದೆ ಎಂದು ಅವರುಹೇಳಿದರು.

ಐಟಿಐ ಕೋರ್ಸ್‌ಗಳಲ್ಲಿ ಫಿಟ್ಟರ್ ಮತ್ತು ಎಲೆಕ್ಟ್ರಿಷಿಯನ್ ಕೋರ್ಸ್‌ಗಳಿಗೆ ಜನಪ್ರಿಯತೆ ಇದೆ. ಉಳಿದ ವಿಭಾಗಗಳ ಮಹತ್ವದ ಕುರಿತು ಅರಿವು ಮೂಡಿಸುವ ಬೃಹತ್ ಕಾರ್ಯಕ್ರಮವನ್ನು ಉದ್ಯೋಗ ಮತ್ತು ತರಬೇತಿ ಇಲಾಖೆ ಹಮ್ಮಿಕೊಳ್ಳಬೇಕು ಎಂದು ಕೃಷ್ಣನ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಜಿ.ಪಂ.ಸಿಇಓ ಡಾ.ಸತೀಶ್ ಬಿ.ಸಿ., ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ ಪ್ರಿಯಾಂಕಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ದೇಶಪಾಂಡೆ ಫೌಂಡೇಶನ್ ಮತ್ತು ಸಿಡಾಕ್ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News