ಇಂದು ದತ್ತಮಾಲಾ ಅಭಿಯಾನ: ಪೊಲೀಸ್ ಬಿಗಿಭದ್ರತೆ

Update: 2018-10-27 18:42 GMT

ಚಿಕ್ಕಮಗಳೂರು, ಅ.27: ಶ್ರೀರಾಮಸೇನೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನದ ಅಂಗವಾಗಿ ಶೋಭಾಯಾತ್ರೆ ರವಿವಾರ ನಗರದಲ್ಲಿ ನಡೆಯಲಿದೆ.
ನಗರದ ಶಂಕರಮಠದಿಂದ ಆರಂಭಗೊಳ್ಳುವ ಶೋಭಾಯಾತ್ರೆ ಬೋಳರಾಮೇಶ್ವರ ದೇವಾಲಯದ ವರೆಗೂ ನಡೆಯಲಿದೆ. ನಂತರ ದೇವಾಲಯ ಆವರಣದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಸಭೆ ಬಳಿಕ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆಯಲಿದ್ದಾರೆ.

ಪೊಲೀಸ್ ಬಂದೋಬಸ್ತ್ ನಿಯೋಜನೆ:ಶೋಭಾಯಾತ್ರೆ ಮತ್ತು ದತ್ತಪಾದುಕೆ ದರ್ಶನದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಅತೀಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ನಿಯೋಜಿಸಲಾಗಿದೆ.
ಜಿಲ್ಲೆಯ ಒಳ ಪ್ರವೇಶಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲು ಗಡಿ ಪ್ರದೇಶ ಸೇರಿದಂತೆ ಅನೇಕ ಕಡೆಗಳಲ್ಲಿ ಚಕ್‌ಪೋಸ್ಟ್ ತೆರೆಯಲಾಗಿದೆ. ಪೊಲೀಸ್ ಅಧಿಕಾರಿಗಳು ಸೇರಿದಂತೆ 2,500 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

15 ಕೆಎಸ್ಸಾರ್ಪಿ ಹಾಗೂ 20 ಡಿಆರ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಭಿಯಾನದ ಅಂಗವಾಗಿ ದತ್ತಪಾದುಕೆಗಳ ದರ್ಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದ್ದು, ಈ ವೇಳೆ ಅಹಿತಕರ ಘಟನೆಗಳ ನಿಯಂತ್ರಣಕ್ಕಾಗಿ ಬಾಬಾ ಬುಡಾನ್‌ಗಿರಿಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಶುಕ್ರವಾರ ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆಗಳ ದರ್ಶನಕ್ಕೆ ಕೈಗೊಂಡಿರುವ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಪ್ರವಾಸಿಗರಿಗೆ ನಿರ್ಬಂಧ

ರವಿವಾರ ಶ್ರೀರಾಮಸೇನೆಯಿಂದ ನಡೆಯಲಿರುವ ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ದತ್ತ ಭಕ್ತರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮುಳ್ಳಯ್ಯನಗಿರಿ ಮತ್ತು ದತ್ತಪೀಠಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಭಕ್ತರು ದತ್ತಪೀಠಕ್ಕೆ ತೆರಳುವ ಸಂದರ್ಭದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News