ಆತ್ಮಸ್ಥೈರ್ಯದಿಂದ ಉತ್ತಮ ಬದುಕು ರೂಪಿಸಿಕೊಳ್ಳಿ: ಎಸ್ಪಿ ಚೇತನ್

Update: 2018-10-27 18:49 GMT

ದಾವಣಗೆರೆ, ಅ.27: ಕೀಳರಿಮೆ ಬೆಳೆಸಿಕೊಂಡು ಮಾನಸಿಕವಾಗಿ ಕುಗ್ಗದೇ ಆತ್ಮಸ್ಥೈರ್ಯದಿಂದ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಎಸಿ್ಪ ಆರ್. ಚೇತನ್ ಸಲಹೆ ನೀಡಿದರು.

ಇಲ್ಲಿನ ಎವಿಕೆ ರಸ್ತೆಯ ರಂಗಮಹಲ್‌ನಲ್ಲಿ ಸ್ನೇಹಸ್ಪೂರ್ತಿ ಯುವಕರ ಕಲಾ ತಂಡ ಡಾ. ಎಪಿಜೆ ಅಬ್ದುಲ್ ಕಲಾಂ ಹುಟ್ಟುಹಬ್ಬದಂಗವಾಗಿ ಹಮ್ಮಿಕೊಂಡಿದ್ದ ದೃಷ್ಟಿ ವಿಶೇಷ ಚೇತನರ ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ವಿಕಲಚೇತನರಿಗೆ ನಿತ್ಯವೂ ಸಂಕಷ್ಟ, ತೊಂದರೆ ತಪ್ಪಿದ್ದಲ್ಲ. ಅದರಲ್ಲೂ ದೃಷ್ಟಿವಿಕಲಚೇತನರಿಗೆ ಹೆಚ್ಚಿನ ತೊಂದರೆ. ಈ ಸಂದರ್ಭ ದೃಷ್ಟಿವಿಕಲರಿಗೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಸ್ನೇಹಸ್ಪೂರ್ತಿ ತಂಡ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ.ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಾಗಲಿ ಎಂದು ಅವರು ಆಶಿಸಿದರು.

ನಮ್ಮ ಸಮಾಜ ಅಂಧರಿಗೆ ಅನುಕಂಪ ತೋರುತ್ತದೇ ವಿನಾಃ ಎಲ್ಲಿಯೂ ಅವರ ಪ್ರತಿಭೆ ಗುರುತಿಸಿ ಅವಕಾಶ ಕಲ್ಪಿಸುವುದಿಲ್ಲ. ಅಂಧರಲ್ಲಿ ಅನೇಕ ವಿಶೇಷ ಗುಣಗಳುಳ್ಳ ಪ್ರತಿಭಾವಂತರಿದ್ದಾರೆ. ಅತ್ಯುತ್ತಮ ಹಾಡುಗಾರರು, ಅಗಾಧ ಜ್ಞಾಪಕಶಕ್ತಿಯುಳ್ಳವರು ಅನೇಕರಿದ್ದಾರೆ. ನಮ್ಮ ಬ್ಯಾಚ್‌ನಲ್ಲಿಯೇ ಅಂಧರೊಬ್ಬರು ಐಎಎಸ್ ಪಾಸ್ ಮಾಡಿ ಅಧಿಕಾರದಲ್ಲಿದ್ದಾರೆ ಎಂದು ನೆನಪಿಸಿಕೊಂಡರು.

ಅಂಧರ ವರ್ಲ್ಡ್‌ಕಪ್ ಕ್ರಿಕೆಟ್‌ನಲ್ಲಿ ಭಾರತದ ಅಂಧಕ್ರೀಡಾಪಟುಗಳು ಕಳೆದ ಮೂರು ವರ್ಷದಿಂದ ವಿಶ್ವಕಪ್ ಗೆಲ್ಲುತ್ತಿರುವುದೇ ಹೆಮ್ಮೆಯ ವಿಷಯ. ಭಾರತದ ಟೀಮ್‌ನಲ್ಲಿ 6 ಜನ ಕರ್ನಾಟಕದವರಿದ್ದು, ಅದರಲ್ಲಿ ಹರಪನಹಳ್ಳಿಯ ಅಂಧಕ್ರೀಡಾಪಟು ಒಬ್ಬರಿರುವುದು ಸಂತೋಷದ ವಿಷಯ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಧಿಕಾರಿ ಕೆ.ಎಚ್. ವಿಜಯಕುಮಾರ್, ತಂಡದ ಪ್ರಧಾನ ಕಾರ್ಯದರ್ಶಿ ಎಂ. ವೀರೇಶ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಬೆಂಗಳೂರು ಕೆನರಾ ಬ್ಯಾಂಕ್ ಮ್ಯಾನೇಜರ್ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಅಂಗವಿಕಲರ ಇಲಾಖೆ ಅಧಿಕಾರಿ ಶಶಿಧರ್ ಸೇರಿದಂತೆ ದಾವಣಗೆರೆ, ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ಹಾವೇರಿ ಮತ್ತಿತರ ಕಡೆಯಿಂದ ದೃಷ್ಟಿ ವಿಶೇಷ ಚೇತನರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News