ರಾ. ಹೆದ್ದಾರಿಯಲ್ಲಿ ಬಿಟ್ಟು ಹೋದ ಮಗ: ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದ ವೃದ್ಧ ತಂದೆ

Update: 2018-10-28 07:33 GMT

ಮಂಗಳೂರು/ಧಾರವಾಡ, ಅ.28: ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧರೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಬೆಂಗಳೂರಿನ ಮತ್ತಿಕೆರೆ ನಿವಾಸಿ ವಿನ್ಸೆಂಟ್ ಕ್ರಿಸ್ಟಿನ್ (76) ಮೃತರು ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ

ಅ. 24ರಂದು ಕಾರಿನಲ್ಲಿ ಬಂದ ಯುವಕನೊಬ್ಬ ಪುಣೆ-ಬೆಂಗಳೂರು ರಾ.ಹೆ.4ರ ಧಾರವಾಡದ ಗರಾಗ್ ಕ್ರಾಸ್ ಬಳಿ ವೃದ್ಧನನ್ನು ಕಾರಿನಿಂದ ಇಳಿಸಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದನು. ಈ ದೃಶ್ಯ ನೋಡಿದ ಸ್ಥಳೀಯರು, ವೃದ್ಧನನ್ನು ಯಾರೋ ಡ್ರಾಪ್ ಮಾಡಿದ್ದಾರೆ ಎಂದುಕೊಂಡಿದ್ದರು. ಆದರೆ, ‘ವೃದ್ಧನಿಗೆ ಎಲ್ಲಿಗೆ ಹೋಗಬೇಕೆಂದು ಗೊತ್ತಾಗದೆ ವಿಚಲಿತನಾಗಿದ್ದರು ಎನ್ನಲಾಗಿದೆ.

ವೃದ್ಧನನ್ನು ಸ್ಥಳೀಯರು ವಿಚಾರಿಸಿದಾಗ, ಮಗನೊಬ್ಬ ವೃದ್ಧ ತಂದೆಯನ್ನು ನಡು ರಸ್ತೆಯಲ್ಲೇ ಬಿಟ್ಟು ಹೋಗಿರುವುದು ಬೆಳಕಿಗೆ ಬಂತು. ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ನಗರದ ಆಸ್ಪತ್ರೆಗೆ ದಾಖಲಿಸಿದ್ದರು.

ಬೆಂಗಳೂರಿನಲ್ಲಿ ಮೆಕಾನಿಕ್ ಆಗಿದ್ದ ವಿನ್ಸೆಂಟ್, ಮತ್ತಿಕೆರೆಯಲ್ಲಿ ಮಗನೊಂದಿಗೆ ವಾಸವಾಗಿದ್ದರು. ತನಗೆ ಮನೆಗೆ ಹೋಗಬೇಕೆಂಬ ಆಸೆಯಿದೆ. ತನ್ನನ್ನು ಮತ್ತಿಕೆರೆ ಮನೆಗೆ ಬಿಡಿ ಅಥವಾ ಹತ್ತಿರದ ಚರ್ಚ್‌ಗೆ ಬಿಡಿ. ತನ್ನ ಬಳಿ ಔಷಧ ಖರೀದಿಸಲು ಹಣವಿಲ್ಲ. ತನಗೆ ಏನಾದರೂ ಕೆಲಸ ಕೊಡಿ. ಅದರಿಂದ ಗಳಿಸಿದ ಹಣದಿಂದ ಔಷಧ ಖರೀದಿಸುವೆ ಎಂದು ವಿನ್ಸೆಂಟ್ ಸಾವನ್ನಪ್ಪುವ ಮೊದಲು ಹೇಳಿಕೊಂಡಿದ್ದರು ಎಂದು ವರದಿಯಾಗಿತ್ತು.

‘ಅವರಿಗೆ ಸತತ ನಾಲ್ಕೈದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಫ್ರೀಝರ್‌ನಲ್ಲಿ ಇಡಲಾಗಿದೆ. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೂ ಅವರ ಫೋಟೊ, ಮಾಹಿತಿಯನ್ನು ರವಾನಿಸಲಾಗಿದ್ದು, ವಾರಸುದಾರರಿಗೆ ಹುಡುಕಾಟ ನಡೆಸಲಾಗುತ್ತಿದೆ. ಈಗಾಗಲೇ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ಬೆಂಗಳೂರಿಗೆ ಕಳುಹಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ’ ಎಂದು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಸೈ ಆನಂದ್ ಅವರು ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News