ಇಸ್ರೋ ಮಾಜಿ ಮುಖ್ಯಸ್ಥ ಮಾಧವನ್ ನಾಯರ್ ಬಿಜೆಪಿ ಸೇರ್ಪಡೆ

Update: 2018-10-28 13:34 GMT

ತಿರುವನಂತಪುರಂ, ಅ.28: ಇಸ್ರೋ(ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ)ಯ ಮಾಜಿ ಅಧ್ಯಕ್ಷ ಜಿ.ಮಾಧವನ್ ನಾಯರ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ರವಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

2003ರಿಂದ 2009ರವರೆಗೆ ಇಸ್ರೋ ಅಧ್ಯಕ್ಷರಾಗಿದ್ದ ನಾಯರ್(74 ವರ್ಷ) ಚಂದ್ರನೆಡೆಗೆ ಭಾರತದ ಪ್ರಥಮ ಅಂತರಿಕ್ಷ ಯೋಜನೆಯಾದ ಚಂದ್ರಯಾನ-1ರ ರೂವಾರಿಯಾಗಿದ್ದರು. ನಾಯರ್ ಅಧ್ಯಕ್ಷತೆಯಲ್ಲಿ ಇಸ್ರೋ ಅಂತರಿಕ್ಷಕ್ಕೆ 25 ಯಶಸ್ವಿ ಉಡ್ಡಯನ ನಡೆಸಿದ್ದು ಇದರಲ್ಲಿ ಇನ್ಸಾಟ್, ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಸೇರಿವೆ. ಸರಕಾರಿ ಖಜಾನೆಗೆ 578 ಕೋಟಿ ರೂ. ನಷ್ಟ ಉಂಟು ಮಾಡಿದೆ ಎನ್ನಲಾಗಿರುವ ಆಂಟ್ರಿಕ್ಸ್-ದೆವಾಸ್ ಒಪ್ಪಂದ ಹಗರಣದಲ್ಲಿ ನಾಯರ್ ಆರೋಪಿಯಾಗಿದ್ದು ಇವರಿಗೆ ದಿಲ್ಲಿಯ ನ್ಯಾಯಾಲಯ ಕಳೆದ ಫೆಬ್ರವರಿಯಲ್ಲಿ ಜಾಮೀನು ಮಂಜೂರುಗೊಳಿಸಿದೆ.

ನಾಯರ್ ಅವರಲ್ಲದೆ ಟ್ರಾವಂಕೋರ್ ದೇವಸ್ವಂ ಬೋರ್ಡ್(ಟಿಡಿಬಿ) ಮಾಜಿ ಅಧ್ಯಕ್ಷ ಹಾಗೂ ಮಾಜಿ ಕಾಂಗ್ರೆಸಿಗ ಜಿ.ರಾಮನ್ ನಾಯರ್, ಮಹಿಳಾ ಆಯೋಗದ ಮಾಜಿ ಸದಸ್ಯೆ ಡಾ ಪ್ರಮೀಳಾ ದೇವಿ, ಕರ್ಣಾಕುಳಂ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ದಿವಾಕರನ್ ನಾಯರ್ ಹಾಗೂ ಮಲಂಕರ ಚರ್ಚ್‌ನ ಥಾಮಸ್ ಜಾನ್ ಅವರೂ ಶಾ ಉಪಸ್ಥಿತಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದೇಶದಲ್ಲಿ ಎಡಪಕ್ಷಗಳ ಆಡಳಿತ ಇರುವ ಏಕೈಕ ರಾಜ್ಯವಾಗಿರುವ ಕೇರಳದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಶನಿವಾರ ಕಣ್ಣೂರಿನಲ್ಲಿ ಬಿಜೆಪಿ ಕಚೇರಿಯನ್ನು ಅಮಿತ್ ಶಾ ಉದ್ಘಾಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News