ಮೂಡಿಗೆರೆ: ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಣೆ

Update: 2018-10-28 12:37 GMT

ಮೂಡಿಗೆರೆ, ಅ.28: ಕಾಡಾನೆಗಳನ್ನು ಸ್ಥಳಾಂತರಿಸಲು ಮತ್ತು ಪರಿಹಾರ ಧನ ಹೆಚ್ಚಳಕ್ಕೆ ವಿಧಾನ ಪರಿಷತ್ತಿನಲ್ಲಿ ಹೋರಾಟ ನಡೆಸುವ ಮೂಲಕ ಸರಕಾರಕ್ಕೆ ತಲುಪಿಸಲಾಗುವುದು ಎಂದು ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು. 

ಅವರು ಭಾನುವಾರ ಮೂಲರಹಳ್ಳಿಯಲ್ಲಿ ಕಾಡಾನೆ ದಾಳಿಯಿಂದ ಸಾವಿಗೀಡಾದ ಸುನೀಲನ ಕುಟುಂಬಕ್ಕೆ 5 ಲಕ್ಷದ ಪರಿಹಾರ ಚೆಕ್ ವಿತರಿಸಿ ಮಾತನಾಡಿ, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಜೀವ ಹಾನಿ, ಬೆಳೆ ಹಾನಿ ಪದೇ ಪದೆ ಉಂಟಾಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಶ್ರೀಲಂಕಾ ಮತ್ತು ಅಸ್ಸಾಂನಲ್ಲಿ ಮಾಡಿರುವಂತೆ, ಕಾಡಾನೆಗಳನ್ನು ನಾಗರಹೊಳೆ ಮತ್ತು ಬಂಡಿಪುರಗಳಂತಹ ರಕ್ಷಿತ ಅರಣ್ಯಗಳಲ್ಲಿ ರೈಲ್ವೇ ಹಳಿಗಳ ಪೆನ್ಸಿಂಗ್ ಮಾಡಿ ಅಲ್ಲಿಂದ ಹೊರ ಬಾರದಂತೆ ಅಲ್ಲಿಗೆ ಸ್ಥಳಾಂತರಿಸುವುದೊಂದೇ ಪರಿಹಾರವಾಗಿದೆ. ಆನೆ ಟ್ರಂಚ್, ಐಬಿಎಕ್ಸ್ ಬೇಲಿಗಳು ಕೇವಲ ತಾತ್ಕಾಲಿಕ ಪರಿಹಾರ. ಅಲ್ಲದೆ ಸತ್ತವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೇವಲವಾಗಿದ್ದು, ಕನಿಷ್ಟ 10 ಲಕ್ಷದ ವರೆಗೆ ಹೆಚ್ಚಿಸಬೇಕಾಗಿದೆ. ಈಗಿರುವ ಬೆಳೆ ಪರಿಹಾರವನ್ನು 4 ಪಟ್ಟು ಹೆಚ್ಚಿಸಬೇಕು. ಈ ಎಲ್ಲಾ ವಿಷಯಗಳ ಬಗ್ಗೆ ಮುಂದಿನ ಅದಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಸರಕಾರದ ಮೇಲೆ ಒತ್ತಡ ಏರಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಮೃತ ಸುನೀಲನ ಪತ್ನಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ ದರ್ಜೆ ಹುದ್ದೆ ಮತ್ತು ಅರಣ್ಯ ಇಲಾಖೆಯಿಂದ 2 ಸಾವಿರ ಮಾಶಾಸನ ನೀಡುವಂತೆ  ಕ್ರಮ ಕೈಗೊಳ್ಳಾಲಾಗುತ್ತಿದೆ. ಅರಣ್ಯ ಇಲಾಖೆಯು ಅವರ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಹೊರಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮೃತ ಸುನೀಲನ ಪತ್ನಿ ಶ್ವೇತಾ ಅವರು, 5 ಲಕ್ಷದಲ್ಲಿ ಜೀನವ ಸಾಗಿಸುವುದು ದುಸ್ಥರವಾಗಿದ್ದು, ಹೆಚ್ಚಿನ ಪರಿಹಾರವನ್ನು ಕೊಡಿಸಿ, ನಮ್ಮ ಕುಟುಂಬವನ್ನು ರಕ್ಷಿಸಲು ಅನುವು ಮಡಿಕೊಡಲೆಂದು ಮನವಿ ಮಾಡಿಕೊಂಡರು. 

ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ಸದಸ್ಯ ದೇವರಾಜು, ಬಿಜೆಪಿ ವಕ್ತಾರ ನಯನ ತಳವಾರ, ಮುಖಂಡರಾದ ಸುಧಾರಕ ಹಳ್ಳಿಬೈಲ್, ಯೋಗೇಶ್ ಪೂಜಾರಿ, ಪರೀಕ್ಷಿತ್ ಜಾವಳಿ, ಎಸಿಎಫ್ ಮುದ್ದಣ್ಣ ಮತ್ತಿತರರು ಉಪಸ್ಥಿತರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News