ದತ್ತಪೀಠ ಹಿಂದೂಗಳಿಗೆ ಒಪ್ಪಿಸದಿದ್ದರೆ ಬೆಳಗಾವಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ: ಪ್ರಮೋದ್ ಮುತಾಲಿಕ್

Update: 2018-10-28 13:10 GMT

ಚಿಕ್ಕಮಗಳೂರು, ಅ.28: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶದೊಳಗೆ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು. ಇಲ್ಲದಿದ್ದರೆ ಬೆಳಗಾವಿ ಅಧಿವೇಶನಲ್ಲಿ ಬೆಳಗಾವಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ನಿರ್ಣಾಯ ಕೈಗೊಳ್ಳಲಾಗಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. 

ಶ್ರೀರಾಮ ಸೇನೆಯ ವತಿಯಿಂದ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನದ ಶೋಭಾಯಾತ್ರೆಯ ನಂತರ ನಗರದ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ರಾಷ್ಟ್ರದಲ್ಲಿ ಹಿಂದೂ ವಿಚಾರಕ್ಕೆ ಮಾನ್ಯತೆ ಇಲ್ಲದೆ ಕೋಮು ಸೌಹಾರ್ದ ಹೆಸರಿನಲ್ಲಿ ಹಿಂದೂ ವಿಚಾರಧಾರೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ರಾಮಮಂದಿರ ನೂರು ಕೋಟಿ ಹಿಂದೂಗಳ ಆರಾಧ್ಯದೈವ. ನೂರು ಕೋಟಿ ಜನರ ರಾಮ ಮಂದಿರ ನಿರ್ಮಾಣದ ಕೂಗು ಕೇಂದ್ರ ಸರಕಾರಕ್ಕೆ ಮತ್ತು ಸವೋಚ್ಛ ನ್ಯಾಯಾಲಯಕ್ಕೆ ತಲುಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಲಯಗಳ ಮಧ್ಯಪ್ರವೇಶ ಅಗತ್ಯವಿಲ್ಲ
ಕೇರಳದ 800 ವರ್ಷಗಳ ಇತಿಹಾಸವಿರುವ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ.  ಶಾಸ್ತ್ರ, ಸಂಪ್ರದಾಯ ಧಿಕ್ಕರಿಸಿ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿದೆ. ಧಾರ್ಮಿಕ ವಿಚಾರದಲ್ಲಿ ನ್ಯಾಯಾಲಯ ಪ್ರವೇಶ ಮಾಡಬಾರದು. ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ 10 ವರ್ಷದ ನಂತರದ ವಯಸ್ಸಿನ ಮತ್ತು 50 ವರ್ಷ ವಯಸ್ಸಿನ ಒಳಗಿನ ಮಹಿಳೆಯರ ಪ್ರವೇಶದ  ಆದೇಶವನ್ನು ಪುನರ್ ಪರಿಶೀಲಿಸಬೇಕೆಂದ ಅವರು, ಹಿಂದೂ ಧರ್ಮದ ಧಾರ್ಮಿಕ ವಿಚಾರಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಬಾರದು. ಕೇರಳದಲ್ಲಿರುವುದು ನಾಸ್ತಿಕರ ಸರಕಾರ. ಅಲ್ಲಿ ಹಿಂದೂಗಳ ಮತಾಂತರ ನಡೆಯುತ್ತಿದೆ. ಕೇಂದ್ರ ಸರಕಾರ ಕಮ್ಯೂನಿಸ್ಟ್ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕು. ಶಬರಿಮಲೆ ದೇವಾಲಯ ಪ್ರವೇಶಕ್ಕೆ ಮುಂದಾದ ಮೂವರು ಮಹಿಳೆಯರ ಹಿಂದೆ ಕೇರಳ ಸರಕಾರವೇ ಇತ್ತು ಎಂದು ಆರೋಪಿಸಿದರು.
 
ದತ್ತಪೀಠ ಹೋರಾಟದ ಲಾಭ ಬಿಜೆಪಿ ಪಡೆದುಕೊಂಡಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ನ್ಯಾಯ ಕೊಟ್ಟಿದ್ದರೆ ಸಮಾಧಾನ ವಾಗುತ್ತಿತ್ತು. ನಮ್ಮ ತ್ಯಾಗ, ಕೂಗಾಟ, ಜೈಲು ಯಾಕಾಗಿ ಎಂದು ಪ್ರಶ್ನಿಸಿದ ಅವರು, ದತ್ತಪೀಠದಲ್ಲಿ ಮೌಲ್ವಿ ಅವರು ಪೂಜೆ ಮಾಡಲು ಹಿಂದಿನ ಸರಕಾರ ಆದೇಶ ಮಾಡಿದೆ ಎಂದರೆ ಇದಕ್ಕೆ ಬಿಜೆಪಿ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಅಧಿಕಾರವಧಿಯಲ್ಲಿ ಈ ಸಂಬಂಧ ನ್ಯಾಯಾಲಯಕ್ಕೆ ಹೋಗಲಿಲ್ಲ. ಸರಿಯಾದ ವಕೀಲರನ್ನು ನೇಮಿಸಲಿಲ್ಲ. ಅದರ ಪರಿಣಾಮ ಇಂದು ಮೌಲ್ವಿ ಪೂಜೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹುಬ್ಬಳಿಯ ಈದ್ಗಾ ಮೈದಾನ ವಿವಾದವನ್ನು ಸೌಹಾರ್ದದಿಂದ ಬಗೆಹರಿಸಿದ ರೀತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದತ್ತಪೀಠ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಿ, ಅಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಿದರೆ ತಮ್ಮನ್ನು ನಮ್ಮ ತಲೆಯ ಮೇಲೆ ಹೊತ್ತು ತಿರುಗುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News