ಶ್ರೀರಾಮುಲು ಸಹೋದರಿ ಬಿಟ್ಟರೆ ಬೇರೆ ಯಾರೂ ಅಭ್ಯರ್ಥಿಗಳಿರಲಿಲ್ಲವೇ: ಸಚಿವ ಎಚ್.ಡಿ.ರೇವಣ್ಣ ಪ್ರಶ್ನೆ

Update: 2018-10-28 13:40 GMT

ಬಳ್ಳಾರಿ, ಅ. 28: ಶಾಸಕ ಶ್ರೀರಾಮುಲು ಸಹೋದರಿ ಜೆ.ಶಾಂತಾ ಅವರನ್ನು ಬಿಟ್ಟರೆ ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಬೇರೆ ಯಾರೂ ಅಭ್ಯರ್ಥಿಗಳಿರಲಿಲ್ಲವೇ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ರವಿವಾರ ಬಳ್ಳಾರಿಯಲ್ಲಿ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರೊಂದಿಗೆ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಮೇಲೆ ಕುಟುಂಬ ರಾಜಕಾರಣ’ದ ಆರೋಪ ಮಾಡುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಇದು ಯಾವ ರಾಜಕಾರಣ ಎಂಬುದನ್ನು ಅವರೇ ಹೇಳಬೇಕು ಎಂದು ವಾಗ್ದಾಳಿ ನಡೆಸಿದರು.

ಮಾಜಿ ಪ್ರಧಾನಿ ದೇವೇಗೌಡ ಅವರು ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ರಾಷ್ಟ್ರೀಯ ಹೆದ್ದಾರಿಗೆ ಚಾಲನೆ ನೀಡಿದ್ದು ದೇವೇಗೌಡ. ನಾವು ಯಾರೂ ಹಿಂದಿನ ಬಾಗಿಲಿನಿಂದ ಬಂದಿಲ್ಲ ಎಂದು ರೇವಣ್ಣ ತಿರುಗೇಟು ನೀಡಿದರು.

ಉತ್ತರ ಕರ್ನಾಟಕಕ್ಕೆ ನಾವು ಏನೂ ಮಾಡಿಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಆದರೆ, ನೀರಾವರಿಗೆ ಹೆಚ್ಚು ಅನುದಾನ ನೀಡಿದ್ದು, ನಾವು. ಕೃಷ್ಣಾ ಮೇಲ್ದಂಡೆಗೆ ಹೆಚ್ಚಿನ ಅನುದಾನ ನೀಡಿದ್ದು ದೇವೇಗೌಡರು ಎಂದು ರೇವಣ್ಣ ಇದೇ ವೇಳೆ ಉಲ್ಲೇಖಿಸಿದರು.

ನಾವು ಯಾವುದೇ ಹೊಂದಾಣಿಕೆ ರಾಜಕಾರಣ ಮಾಡುತ್ತಿಲ್ಲ. ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಉಪ ಚುನಾವಣೆಯಲ್ಲಿ ಗೆದ್ದರೆ ನಾನೇ ಖುದ್ದು ಬಳ್ಳಾರಿಗೆ ಬಂದು ಇಲಾಖೆಯ ಬಾಕಿ ಇರುವ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುವೆ ಎಂದು ರೇವಣ್ಣ ಭರವಸೆ ನೀಡಿದರು.

ಕಾಂಗ್ರೆಸ್-ಜೆಡಿಎಸ್ ಅಲೆ: ಬಳ್ಳಾರಿಯ ಎಂಟು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದು, ಎಲ್ಲ ಕಡೆ ಕಾಂಗ್ರೆಸ್-ಜೆಡಿಎಸ್ ಅಲೆ ಇದೆ. ನನ್ನ ಗೆಲುವು ನಿಶ್ಚಿತ ಎಂದು ಬಳ್ಳಾರಿ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಕೇವಲ 62 ಕೋಟಿ ರೂ.ಬೋಫೊರ್ಡ್ ಹಗರಣ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರು, ಇದೀಗ 30 ಸಾವಿರ ಕೋಟಿ ರೂ.ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಟೀಕಿಸಿದ ಅವರು, ಬಳ್ಳಾರಿಯಲ್ಲಿ ಶ್ರೀರಾಮುಲು ಕುಟುಂಬ ಬಿಟ್ಟರೆ ವಾಲ್ಮೀಕಿ ಸಮಾಜದ ಬೇರೆ ಯಾರೂ ಅಭ್ಯರ್ಥಿ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಆದರೆ, ಶ್ರೀರಾಮುಲು ಜಿಲ್ಲೆ ಜನತೆ ವಿಶ್ವಾಸ ಕಳೆದುಕೊಂಡಿದ್ದರಿಂದಲೇ ಅವರು ಚಿತ್ರದುರ್ಗ ಜಿಲ್ಲೆಗೆ ಹೋಗಿದ್ದಾರೆಂದು ಟೀಕಿಸಿದ ಅವರು, ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News