ಬಿಜೆಪಿ ಮುಖಂಡರಿಗೆ ‘ರಫೇಲ್’ ನಡುಕ: ಮಲ್ಲಿಕಾರ್ಜುನ ಖರ್ಗೆ

Update: 2018-10-28 15:18 GMT

ಬಾಗಲಕೋಟೆ, ಅ. 28: ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ಸಂಬಂಧ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಸೇರಿದಂತೆ ಕೆಲ ಮುಖಂಡರು ಸಿಬಿಐಗೆ ದೂರು ನೀಡಿದ್ದು, ಬಿಜೆಪಿ ನಾಯಕರಲ್ಲಿ ನಡುಕ ಆರಂಭವಾಗಿದೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.

ರವಿವಾರ ಇಲ್ಲಿನ ಸಾವಳಗಿಯಲ್ಲಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಆನಂದ್ ನ್ಯಾಮಗೌಡ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಫೇಲ್ ಯುದ್ದ ವಿಮಾನ ಖರೀದಿ ಹಗರಣದ ಹಿನ್ನೆಲೆಯಲ್ಲಿಯೇ ರಾತ್ರೋರಾತ್ರಿ ಸಿಬಿಐ ನಿರ್ದೇಶಕರನ್ನು ಮನೆಗೆ ಕಳುಹಿಸಲಾಗಿದೆ ಎಂದು ದೂರಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಫೇಲ್ ಯುದ್ಧ ವಿಮಾನ ಹಗರಣವನ್ನು ಬಯಲಿಗೆಳೆದರೆ, ಪ್ರಧಾನಿ ಮೋದಿ ಅವರನ್ನು ಗೇಲಿ ಮಾಡುತ್ತಿದ್ದಾರೆ. ಆದರೆ, ಅವರು ಎತ್ತಿರುವ ಯಾವುದೇ ಪ್ರಶ್ನೆಗಳಿಗೆ ಮೋದಿ ಇದುವರೆಗೂ ಉತ್ತರ ನೀಡುತ್ತಿಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

ಸುಳ್ಳು ಹೇಳುವುದರಲ್ಲಿ ನಿಸ್ಸಿಮರು: ಪ್ರಧಾನಿ ಮೋದಿ ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದಂತೆಯೆ ಹೇಳುತ್ತಾರೆ. ಉದ್ಯೋಗ ಕೊಡುತ್ತೇನೆಂದು ಯುವಕರಿಗೆ ಮೋಸ ಮಾಡಿದರು. ವಿದೇಶದಿಂದ ಕಪ್ಪುಹಣ ತಂದು ಜನರ ಬ್ಯಾಂಕ್ ಖಾತೆಗೆ ತಲಾ 15ಲಕ್ಷ ರೂ.ಹಾಕುತ್ತೇನೆಂದು ಹೇಳಿದ್ದರೂ, ನಿಮಗ್ಯಾರಿಗಾದರೂ ಹಣ ಬಂದಿದ್ದೆಯೇ? ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಸಂವಿಧಾನ ತಿದ್ದುಪಡಿ ಮಾಡಬೇಕೆಂದು ಬಿಜೆಪಿ ಹೇಳುತ್ತಿದೆ. ಆದರೆ, ಅದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಬಿಜೆಪಿ ಆಡಳಿತದಿಂದ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಗಂಡಾಂತರ ಎದುರಾಗಿದೆ ಎಂದ ಅವರು, ದೇಶ ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಶ್ರಮಿಸಿದೆ. ಬಿಜೆಪಿ ಏನು ಮಾಡಿದೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದರೂ ದೇಶದಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಗಗನಮುಖಿಯಾಗಿದ್ದು, ಜನತೆ ಸಂಕಷ್ಟದಲ್ಲಿದ್ದಾರೆ. ರೈತರನ್ನು ಉದ್ದಾರ ಮಾಡುತ್ತೇನೆಂದ ಬಿಜೆಪಿ ಮುಖಂಡರೆಲ್ಲ ಎಲ್ಲಿ ಹೋದರು ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ದನದ ಚರ್ಮ ಸುಲಿಯುವ ದಲಿತರನ್ನು ಗೋವುಗಳ ಕಳ್ಳರೆಂದು ಮನಸೋ ಇಚ್ಛೆ ಹಲ್ಲೆ ನಡೆಸಿದರೂ, ಮಾತೇ ಆಡದ ಪ್ರಧಾನಿ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸಿಮರು ಎಂದು ಟೀಕಿಸಿದ ಖರ್ಗೆ, ಕೆಲಸ ಮಾಡದೆ ಸುಳ್ಳು ಹೇಳುವವರಿಗೆ ನೀವು ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದು ಮನವಿ ಮಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಬಿ.ಖಂಡ್ರೆ, ಮೈತ್ರಿ ಅಭ್ಯರ್ಥಿ ಆನಂದ್ ನ್ಯಾಮಗೌಡ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News